ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಬಿಎಸ್‌ಇ 12ನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶ ಇಂದು ಮಂಗಳವಾರ ಪ್ರಕಟವಾಗಿದ್ದು, ವಿದ್ಯಾರ್ಥಿನಿಯರು ಶೇಕಡಾ 5ರಷ್ಟು ಹೆಚ್ಚಿನ ಅಂಕ ಗಳಿಸಿ ಮೇಲುಗೈ ಸಾಧಿಸಿದ್ದಾರೆ ಎಂದು ಪರೀಕ್ಷಾ ನಿಯಂತ್ರಕ ಸನ್ಯಾಮ್ ಭಾರದ್ವಾಜ್ ತಿಳಿಸಿದ್ದಾರೆ.
ಈ ವರ್ಷ, ಶೇಕಡಾ 88.39 ರಷ್ಟು ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ, ಕಳೆದ ವರ್ಷದ ಶೇಕಡಾ 87.98 ಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ವಿದ್ಯಾರ್ಥಿನಿಯರು ಶೇಕಡಾ 91.64 ರಷ್ಟು ಉತ್ತೀರ್ಣರಾಗಿದ್ದರೆ, ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ ಪ್ರಮಾಣ ಶೇಕಡಾ 85.70 ರಷ್ಟಿದೆ.
ತೃತೀಯ ಲಿಂಗ ಅಭ್ಯರ್ಥಿಗಳು ಕಳೆದ ವರ್ಷದ ಶೇಕಡಾ 50 ಕ್ಕೆ ಹೋಲಿಸಿದರೆ ಈ ವರ್ಷ ಎಲ್ಲರೂ ಉತ್ತೀರ್ಣರಾಗಿದ್ದು, ಶೇಕಡಾ 100 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
12ನೇ ತರಗತಿ ಪರೀಕ್ಷೆಯಲ್ಲಿ 1.15 ಲಕ್ಷ ವಿದ್ಯಾರ್ಥಿಗಳು ಶೇ 90ರಷ್ಟು ಅಂಕ ಗಳಿಸಿದ್ದು, 24,000 ವಿದ್ಯಾರ್ಥಿಗಳು ಶೇ 95ರಷ್ಟು ಅಂಕ ಗಳಿಸಿದ್ದಾರೆ. ಫೆ. 4ರಿಂದ ಏಪ್ರಿಲ್ 15ರವರೆಗೆ 12ನೇ ತರಗತಿ ಪರೀಕ್ಷೆಗಳು ದೇಶಾದ್ಯಂತ ನಡೆದಿದ್ದು, ಸುಮಾರು 42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು.
ಸದ್ಯ ಸಿಬಿಎಸ್ಸಿಯ 12ನೇ ತರಗತಿ ಫಲಿತಾಂಶ ಬಿಡುಗಡೆಯಾಗಿದ್ದು, 10ನೇ ತರಗತಿ ಫಲಿತಾಂಶಕ್ಕಾಗಿ ಇನ್ನು ವಿದ್ಯಾರ್ಥಿಗಳು ಎದುರು ನೋಡುತ್ತಿದ್ದಾರೆ.