ಪನೀರ್ ಮತ್ತು ಪಾಲಕ್ ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇವೆರಡನ್ನೂ ಬೆರೆಸಿ ಇವತ್ತು ಹೊಸ ರುಚಿಯೊಂದನ್ನು ಟ್ರೈ ಮಾಡೋಣ. ಅದೇ ಪಾಲಕ್ ಪನೀರ್ ಪಲಾವ್ ಮಾಡೋದು ಸುಲಭ ರೆಸಿಪಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ಪಾಲಕ್ ಸೊಪ್ಪು- 1 ಕಪ್
ಪನೀರ್- ಅರ್ಧ ಕಪ್
ನೀರು- ಅಗತ್ಯಕ್ಕೆ ತಕ್ಕಷ್ಟು
ಎಣ್ಣೆ- ಮೂರು ಟೀ ಚಮಚ
ತುಪ್ಪ- ಎರಡು ಟೀ ಚಮಚ
ಜೀರಿಗೆ- ಒಂದು ಟೀ ಚಮಚ
ಮೆಣಸಿನಕಾಯಿ- ಎರಡು
ಬೆಳ್ಳುಳ್ಳಿ ಪೇಸ್ಟ್- ಎರಡು ಟೀ ಚಮಚ
ಶುಂಠಿ ಪೇಸ್ಟ್- ಎರಡು ಟೀ ಚಮಚ
ಮೆಣಸಿನ ಪುಡಿ- ಒಂದೂವರೆ ಚಮಚ
ಈರುಳ್ಳಿ- ಕಾಲು ಕಪ್
ಕಾಳುಮೆಣಸಿನ ಪುಡಿ- 1 ಟೀ ಚಮಚ
ಕೊತ್ತಂಬರಿ ಪುಡಿ- ಒಂದು ಟೀ ಚಮಚ
ಬೇಯಿಸಿದ ಅನ್ನ- ಎರಡು ಕಪ್
ಮಾಡುವ ವಿಧಾನ
ಮೊದಲಿಗೆ ಒಂದು ಪಾತ್ರೆಯಲ್ಲಿ ನೀರು ಮತ್ತು ಚಿಟಿಕೆ ಉಪ್ಪನ್ನು ಸೇರಿಸಿ. ಇದಕ್ಕೆ ಪಾಲಕ್ ಸೊಪ್ಪನ್ನು ಹಾಕಿ ಬೇಯಿಸಿ. ನಂತರ ಇದನ್ನು ಮಿಕ್ಸಿ ಜಾರಿನಲ್ಲಿ ಹಾಕಿ ರುಬ್ಬಿಕೊಳ್ಳಿ.
ಈಗ ಕಡಾಯಿಯನ್ನು ಒಲೆಯ ಮೇಲೆ ಇರಿಸಿ. ಇದಕ್ಕೆ ಎಣ್ಣೆ ಮತ್ತು ತುಪ್ಪ ಎರಡನ್ನೂ ಸೇರಿಸಿ. ಇದು ಬಿಸಿಯಾದ ನಂತರ, ಜೀರಿಗೆ ಮತ್ತು ಮೆಣಸಿನಕಾಯಿ ಹಾಕಿ ಹುರಿಯಿರಿ. ನಂತರ ಕತ್ತರಿಸಿದ ಬೆಳ್ಳುಳ್ಳಿ ಎಸಳು ಮತ್ತು ಕತ್ತರಿಸಿದ ಶುಂಠಿ, ಈರುಳ್ಳಿ ಹಾಕಿ ಹುರಿಯಿರಿ.
ಈರುಳ್ಳಿ ಬಣ್ಣ ಬದಲಾದ ನಂತರ ಪನೀರ್ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಕಸೂರಿ ಮೇಥಿ ಬೆರೆಸಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ, ಚೆನ್ನಾಗಿ ಎಣ್ಣೆಯಲ್ಲಿ ಹುರಿಯಬೇಕು. ನಂತರ ರುಬ್ಬಿರುವ ಪಾಲಕ್ ಸೊಪ್ಪಿನ ಮಿಶ್ರಣವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಸಣ್ಣ ಉರಿಯಲ್ಲಿಟ್ಟು ಬೇಯಿಸಿ. ನಂತರ ಇದಕ್ಕೆ ಮೆಣಸಿನ ಪುಡಿ ಮತ್ತು ಕೊತ್ತಂಬರಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ.
ನಂತರ ಇದಕ್ಕೆ ಬೇಯಿಸಿದ ಅನ್ನ ಹಾಕಿ. ಅದಕ್ಕೆ ಒಂದು ಚಮಚ ತುಪ್ಪ, ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ ಪಾಲಕ್ ಪನೀರ್ ಪಲಾವ್ ರೆಡಿ.