ಹೊಸದಿಗಂತ ಡಿಜಿಟಲ್ ಡೆಸ್ಕ್:
ʻಆಪರೇಷನ್ ಸಿಂಧೂರʼ ವಿಜಯೋತ್ಸವ ಆಚರಣೆ ವೇಳೆ ಪಾಕ್ ಪರ ಘೋಷಣೆ ಕೂಗಿದ ಆರೋಪದ ಮೇಲೆ ಟೆಕ್ಕಿಯೊಬ್ಬನನ್ನ ಬಂಧಿಸಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್‌ನ ಪ್ರಶಾಂತ್ ಲೇಔಟ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶುಭಾಂಶು ಶುಕ್ಲಾ (26) ಬಂಧಿತ ಆರೋಪಿ. ಛತ್ತಿಸ್‌ಗಢ ಮೂಲದ ಶುಕ್ಲಾ ಬೆಂಗಳೂರಿನಲ್ಲಿ ಟೆಕ್ಕಿ ಆಗಿ ಕೆಲಸ ಮಾಡಿಕೊಂಡಿದ್ದ, ವೈಟ್‌ಫೀಲ್ಡ್‌ನ ಪ್ರಶಾಂತ್ ಲೇಔಟ್‌ನಲ್ಲಿ ವಾಸಿಸುತ್ತಿದ್ದ. ಮೇ 9ರಂದು ಈ ಬಡಾವಣೆಯಲ್ಲಿ ʻಆಪರೇಷನ್ ಸಿಂಧೂರʼ ವಿಜಯೋತ್ಸವ ಆಚರಿಸಲಾಗುತ್ತಿತ್ತು. ಈ ವೇಳೆ ಶುಭಾಂಶು ಶುಕ್ಲಾ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾನೆ.
ಬಡಾವಣೆ ನಿವಾಸಿಗಳು ಸಂಭ್ರಮಾಚರಣೆ ನಡೆಸುವ ವೇಳೆ ಪಿಜಿಯಲ್ಲೇ ಇದ್ದ ಶುಭಾಂಶು ಬಾಲ್ಕನಿಗೆ ಬಂದು ಪಾಕಿಸ್ತಾನ ಪರ ಜೋರಾಗಿ ಘೋಷಣೆ ಕೂಗಿದ್ದಾನೆ. ಈ ವೇಳೆ ಆತಂಕಗೊಂಡ ಕೆಲ ಪಿಜಿ ಯುವಕರು ಹೊರಬಂದು ನೋಡಿದಾಗ ಶುಭಾಂಶು ಬಾಲ್ಕನಿಯಲ್ಲಿ ನಿಂತು ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ. ಬಳಿಕ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ವೈಟ್‌ಫೀಲ್ಡ್ ಪೊಲೀಸರು ಆತನನ್ನ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.
ವಿಚಾರಣೆ ವೇಳೆ ಆತ ಘೋಷಣೆ ಕೂಗಿರೋದು ದೃಢಪಟ್ಟಿದ್ದು, ಜೈಲಿಗೆ ಅಟ್ಟಲಾಗಿದೆ.