ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪರೇಷನ್ ಸಿಂದೂರದ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದ ಕರ್ನಲ್ ಸೋಫಿಯಾ ಖುರೇಷಿ ಪತಿಯ ಬೆಳಗಾವಿ ಮನೆ ಮೇಲೆ ಆರ್ಎಸ್ಎಸ್ ದಾಳಿ ನಡೆಸಿದೆ ಎಂಬ ವದಂತಿ ಹರಡಿತ್ತು. ಆದರೆ ಇದು ಸುಳ್ಳು ಸುದ್ದಿ ಯಾರೂ ಇದನ್ನು ನಂಬಬೇಡಿ ಎಂದು ಎಸ್ಪಿ ಮನವಿ ಮಾಡಿದ್ದಾರೆ.
ಎಸ್ಪಿ ಡಾ.ಭೀಮಾಶಂಕರ ಗುಳೇದ್ ಈ ಬಗ್ಗೆ ಮಾತನಾಡಿದ್ದು, ಎಕ್ಸ್ (X) ಖಾತೆಯಲ್ಲಿ ಕರ್ನಲ್ ಸೋಫಿಯಾ ಪತಿ ಮನೆಯ ಮೇಲೆ ಆರ್ಎಸ್ಎಸ್ ಬೆಂಬಲಿತ ಹಿಂದೂಗಳು ದಾಳಿ ಮಾಡಿ, ಮನೆ ದ್ವಂಸ ಮಾಡಿದ್ದಾರೆ ಎಂದು ಸುಳ್ಳು ಪೋಸ್ಟ್ ಹಾಕಲಾಗಿತ್ತು. ಅನೀಸ್ ಉದ್ದಿನ್ ಎಂಬಾತ ಎಕ್ಸ್ ಖಾತೆಯಲ್ಲಿ ಸುಳ್ಳು ಸುದ್ದಿ ಹಾಕಿಕೊಂಡಿದ್ದ. ಪೋಸ್ಟ್ನಲ್ಲಿ ಕರ್ನಲ್ ಸೋಫಿಯಾ ಅವರ ಫೋಟೋ ಹಾಗೂ ಮನೆಯನ್ನು ಧ್ವಂಸ ಮಾಡಿರುವ ಯಾವುದೋ ಒಂದು ಹಳೆಯ ಫೋಟೋವನ್ನು ಹಾಕಿ ಹಂಚಿಕೊಳ್ಳಲಾಗಿತ್ತು.
ಈ ವಿಚಾರವಾಗಿ ಜಿಲ್ಲಾ ಸಾಮಾಜಿಕ ಮಾಧ್ಯಮ ಮಾನಿಟರಿಂಗ್ ಟೀಂ ನಮ್ಮ ಗಮನಕ್ಕೆ ತಂದಿತ್ತು. ನಾನು ಅದಕ್ಕೆ ಇದು ಸುಳ್ಳು ಸುದ್ದಿ ಎಂದು ಕಾಮೆಂಟ್ ಮಾಡಿದೆ. ತಕ್ಷಣ ಆ ವ್ಯಕ್ತಿ ಅದನ್ನು ಡಿಲೀಟ್ ಮಾಡಿದ್ದಾನೆ. ಕೂಡಲೇ ನಾವು ಸೋಫಿಯಾ ಖುರೇಷಿ ಅವರ ಪತಿ ಮನೆಗೆ ನಮ್ಮ ಪೊಲೀಸರನ್ನು ಕಳಿಸಿದ್ದೆವು, ಯಾವುದೇ ದಾಳಿ ನಡೆದಿಲ್ಲ ಎನ್ನುವುದು ಗೊತ್ತಾಗಿದೆ. ಆದರೂ ಸದ್ಯ ಸುರಕ್ಷತಾ ದೃಷ್ಟಿಯಿಂದ ಪೊಲೀಸರು ಸೋಫಿಯಾ ಪತಿ ಮನೆಗೆ ಭದ್ರತೆ ಒದಗಿಸಿದ್ದಾರೆ. ಜೊತೆಗೆ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಆ ವ್ಯಕ್ತಿ ಎಕ್ಸ್ ಖಾತೆಯಿಂದ ಪೋಸ್ಟ್ ಡಿಲೀಟ್ ಮಾಡಿದ್ದಾನೆ ಎಂದು ತಿಳಿಸಿದರು.