ಕನ್ನಡಿಗರ ಕುರಿತು ಹೇಳಿಕೆ: ಗಾಯಕ ಸೋನು ನಿಗಮ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಹಲ್ಗಾಮ್ ದಾಳಿಗೆ ಕನ್ನಡಿಗರನ್ನು ಹೋಲಿಸಿದ ಗಾಯಕ ಸೋನು ನಿಗಮ್ ವಿರುದ್ಧ ನಗರದ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕನ್ನಡಪರ ಸಂಘಟನೆಗಳು ದೂರು ದಾಖಲಿಸಿದ್ದವು. ದೂರಿನ ಅನುಸಾರ ಪೊಲೀಸರು ಸೋನು ನಿಗಂಗೆ ನೊಟೀಸ್ ಜಾರಿ ಮಾಡಿದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಅದರ ಬೆನ್ನಲ್ಲೆ ಗಾಯಕ ಸೋನು ನಿಗಂ ತಮ್ಮ ಮೇಲಿನ ಎಫ್​ಐಆರ್ ರದ್ದು ಮಾಡುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದು ಇದೀಗ, ನ್ಯಾಯಾಲಯವು ಸೋನು ನಿಗಮ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶ ಹೊರಡಿಸಿದೆ.

ತನಿಖೆಗೆ ಹಾಜರಾಗಿಲ್ಲವೆಂದು ಹೆಚ್ಚುವರಿ SPP ಬಿ.ಎನ್.ಜಗದೀಶ್ ನ್ಯಾಯಾಲಯಕ್ಕೆ ಹೇಳಿದರು. ಬೆಂಗಳೂರಿಗೆ ಸೋನು ನಿಗಮ್ ಹಾಜರಾದರೆ ಸಮಸ್ಯೆ ಆಗಬಹುದು, ವಿಚಾರಣೆಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕು ಎಂದು ಸೋನು ನಿಗಂ ಪರ ವಕೀಲರು ಹೈಕೋರ್ಟ್​ಗೆ ಮನವಿ ಮಾಡಿದರು.

ಎರಡೂ ಕಡೆಯ ವಾದ ಆಲಿಸಿದ ನ್ಯಾ.ಶಿವಶಂಕರ್ ಅಮರಣ್ಣವರ್ ಅವರು, ಸೋನು ನಿಗಂ ಅವರಿರುವ ಜಾಗದಲ್ಲಿಯೇ ವಿಚಾರಣೆ ಮಾಡುವಂತೆ ಅಥವಾ ವಿಡಿಯೋ ಕಾಲ್ ಮೂಲಕ ವಿಚಾರಣೆ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಮಾತ್ರವಲ್ಲದೆ ಸೋನು ನಿಗಂ ಅವರ ವಿರುದ್ಧ ಯಾವುದೇ ಬಲವಂತ ಕ್ರಮ ಕೈಗೊಳ್ಳಬಾರದೆಂದು ಹಾಗೂ ನ್ಯಾಯಾಲಯದ ಅನುಮತಿ ಇಲ್ಲದೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಬಾರದು ಎಂದು ಸೂಚನೆ ನೀಡಿದರು.

ನ್ಯಾಯಾಲಯದ ಸೂಚನೆಯಂತೆ ಬೆಂಗಳೂರು ಪೊಲೀಸರು ಮುಂಬೈಗೆ ಹೋಗಿ ಸೋನು ನಿಗಂ ನಿವಾಸದಲ್ಲಿ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!