ಅವರು ನಮ್ಮ ತಲೆಗೆ ಹೊಡೆದ್ರೆ, ನಾವು ಅವರ ಎದೆಗೆ ದಾಳಿ ನಡೆಸಿದ್ದೇವೆ: ಪಾಕ್ ಗೆ ರಾಜನಾಥ್‌ ಸಿಂಗ್‌ ಖಡಕ್‌ ಸಂದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಪಾಕಿಸ್ತಾನ ಉದ್ವಿಗ್ನತೆ ನಂತರ ಮೊದಲ ಬಾರಿಗೆ ಜಮ್ಮು ಕಾಶ್ಮೀರಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭೇಟಿ ನೀಡಿದ್ದಾರೆ.

ಶ್ರೀನಗರದಲ್ಲಿರುವ ಸೇನೆಯ 15 ಕಾರ್ಪ್ಸ್ ಪ್ರಧಾನ ಕಚೇರಿಗೆ ತೆರಳಿ ಸೇನಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು.

ವೇಳೆ ಮಾತನಾಡಿದ ಅವರು, ಅವರು ನಮ್ಮ ತಲೆಗೆ ಹೊಡೆದರೆ, ನಾವು ಎದೆ ಬಗೆಯುತ್ತೇವೆ ಎಂದು ಪಾಕಿಸ್ತಾನಕ್ಕೆ ಖಡಕ್‌ ಸಂದೇಶ ರವಾನಿಸಿದ್ದಾರೆ.

ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧ ಹೋರಾಡುವಾಗ ವೀರ ಯೋಧರ ತ್ಯಾಗಕ್ಕೆ ನಾನು ನಮಸ್ಕರಿಸುತ್ತೇನೆ. ಅವರ ಸ್ಮರಣೆಗೆ ನಾನು ಗೌರವ ಸಲ್ಲಿಸುತ್ತೇನೆ. ಪಹಲ್ಗಾಮ್‌ನಲ್ಲಿ ಕೊಲ್ಲಲ್ಪಟ್ಟ ಮುಗ್ಧ ನಾಗರಿಕರಿಗೂ ನಾನು ಗೌರವ ಸಲ್ಲಿಸುತ್ತೇನೆ. ಗಾಯಗೊಂಡ ಸೈನಿಕರ ಶೌರ್ಯಕ್ಕೂ ನಾನು ನಮಸ್ಕರಿಸುತ್ತೇನೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಈ ಕ್ಷಣ ನಿಮ್ಮೊಂದಿಗೆ ಇರುವುದಕ್ಕೆ ನನಗೆ ಹೆಮ್ಮೆ ಅನಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಆಪರೇಷನ್ ಸಿಂದೂರ ಸಮಯದಲ್ಲಿ ನಿಮ್ಮೆಲ್ಲರ ಹೋರಾಟಕ್ಕೆ ಇಡೀ ರಾಷ್ಟ್ರವೇ ಹೆಮ್ಮೆಪಡುತ್ತದೆ. ನಿಮ್ಮ ರಕ್ಷಣಾ ಸಚಿವರಾಗುವ ಮೊದಲು, ನಾನು ಭಾರತೀಯ ನಾಗರಿಕ. ರಕ್ಷಣಾ ಸಚಿವರಾಗುವುದರ ಜೊತೆಗೆ, ಭಾರತೀಯ ಪ್ರಜೆಯಾಗಿ ನಿಮಗೆ ಕೃತಜ್ಞತೆ ಸಲ್ಲಿಸಲು ನಾನು ಇಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

ಪಹಲ್ಗಾಮ್ ದಾಳಿಯ ನಂತರ, ಜಮ್ಮು ಮತ್ತು ಕಾಶ್ಮೀರದ ಜನರು ಪಾಕಿಸ್ತಾನ ಮತ್ತು ಭಯೋತ್ಪಾದಕರ ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ನಾನು ಜಮ್ಮು ಮತ್ತು ಕಾಶ್ಮೀರದ ಜನರಿಗೆ ನಮಸ್ಕರಿಸುತ್ತೇನೆ. ಶತ್ರುಗಳನ್ನು ನಾಶಪಡಿಸಿದ ಆ ಶಕ್ತಿಯನ್ನು ಅನುಭವಿಸಲು ನಾನು ಇಲ್ಲಿದ್ದೇನೆ. ಗಡಿಯಾಚೆಗಿನ ಪಾಕಿಸ್ತಾನಿ ಚೌಕಿಗಳನ್ನು ಮತ್ತು ಬಂಕರ್‌ಗಳನ್ನು ನೀವು ನಾಶಪಡಿಸಿದ ರೀತಿ, ಶತ್ರುಗಳು ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಆಪರೇಷನ್ ಸಿಂದೂರ್ ಮೂಲಕ, ಭಾರತವು ಭಯೋತ್ಪಾದನೆಯನ್ನು ಎದುರಿಸಲು ಯಾವುದೇ ಮಟ್ಟಕ್ಕೆ ಹೋಗಲು ತನ್ನ ಅಚಲ ದೃಢಸಂಕಲ್ಪ ಮತ್ತು ಸಿದ್ಧತೆಯನ್ನು ಜಗತ್ತಿಗೆ ಪ್ರದರ್ಶಿಸಿದೆ. ಭಾರತವು ಕೇವಲ ಆತ್ಮರಕ್ಷಣೆಗೆ ಮಾತ್ರವಲ್ಲದೆ ಬಲವಾದ ಪ್ರತೀಕಾರದ ಕ್ರಮವನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ತೋರಿಸಿದೆ. ಈ ಮೂಲಕ, ಭಾರತವು ಜಗತ್ತಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಯಾವುದೇ ಮಟ್ಟಕ್ಕೆ ಹೋಗಲು ಸಿದ್ಧವಾಗಿದೆ. ಭಯೋತ್ಪಾದಕರು ಭಾರತದ ಹಣೆಯ ಮೇಲೆ ದಾಳಿ ಮಾಡಿದಾಗ, ನಾವು ಅವರ ಹೃದಯದ ಮೇಲೆ ಪ್ರತಿದಾಳಿ ನಡೆಸಿದ್ದೇವೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!