ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನದ ನಡುವೆ ಪರಸ್ಪರ ವೈಮಾನಿಕ ದಾಳಿ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾತ್ರಿಯಿಡೀ ನಡೆದ ಎರಡೂ ದೇಶಗಳೊಂದಿಗಿನ ಮಾತುಕತೆಯ ಬಳಿಕ ಭಾರತ ಮತ್ತು ಪಾಕಿಸ್ತಾನ ತಕ್ಷಣ ಮತ್ತು ಪೂರ್ಣ ಪ್ರಮಾಣದ ಕದನವಿರಾಮಕ್ಕೆ ಒಪ್ಪಿವೆ ಎಂದು ಹೇಳಿದ್ದರು.
ಇದಾದ ಬಳಿಕ ಅಮೆರಿಕದ ಮಧ್ಯಸ್ಥಿಕೆಯಿಂದ ಪ್ರಧಾನಿ ಮೋದಿ ಪಾಕ್ ಜೊತೆಗೆ ಕದನವಿರಾಮಕ್ಕೆ ಒಪ್ಪಿದ್ದಕ್ಕೆ ವಿಪಕ್ಷಗಳಿಂದ ವಿರೋಧವೂ ವ್ಯಕ್ತವಾಗಿತ್ತು. ಇದೀಗ ಇಂದಿನ ಭಾಷಣದಲ್ಲಿ ವರಸೆಯನ್ನೇ ಬದಲಿಸಿರುವ ಡೊನಾಲ್ಡ್ ಟ್ರಂಪ್ ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ನಾನೇ ಪೂರ್ತಿ ಕಾರಣ ಅಲ್ಲ ಎಂದು ಹೇಳಿದ್ದಾರೆ.
ಭಾರತ-ಪಾಕಿಸ್ತಾನ ಕದನ ವಿರಾಮದ ಸಂಪೂರ್ಣ ಕ್ರೆಡಿಟ್ ನಾನೇ ಹೇಳಿಕೊಳ್ಳುವುದಿಲ್ಲ . ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ತಾವ ಪ್ರಮುಖ ಪಾತ್ರ ವಹಿಸಿದ್ದಾಗಿ ಹೇಳಿಕೊಂಡಿದ್ದಾರೆ.
ತಮ್ಮ ಐತಿಹಾಸಿಕ ಮಧ್ಯಪ್ರಾಚ್ಯ ಭೇಟಿಯಲ್ಲಿ ಇಂದು ಮಾತನಾಡಿದ ಟ್ರಂಪ್, ‘ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದೇನೆ. ನಾನೇ ಪೂರ್ತಿಯಾಗಿ ಇದಕ್ಕೆ ಕಾರಣ ಎಂದು ಹೇಳಲು ಬಯಸುವುದಿಲ್ಲ. ಆದರೆ ಕಳೆದ ವಾರ ಪಾಕಿಸ್ತಾನ ಮತ್ತು ಭಾರತದ ನಡುವಿನ ಸಮಸ್ಯೆಯನ್ನು ಪರಿಹರಿಸಲು ನಾನು ಖಂಡಿತವಾಗಿಯೂ ಸಹಾಯ ಮಾಡಿದೆ. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ಆ ಎರಡೂ ದೇಶಗಳ ನಡುವಿನ ಗಲಭೆ ಹೆಚ್ಚಾಗುತ್ತಿತ್ತು ಎಂದಿದ್ದಾರೆ.
ಪಾಕಿಸ್ತಾನ ಮತ್ತು ಭಾರತ ನಡುವಿನ ದ್ವೇಷವನ್ನು ಇತ್ಯರ್ಥಪಡಿಸಲಾಗಿದೆ. ಕದನವಿರಾಮದಿಂದ ಪಾಕಿಸ್ತಾನ ಮತ್ತು ಭಾರತ ಎರಡೂ ಸಂತೋಷಗೊಂಡಿವೆ ಎಂದು ಟ್ರಂಪ್ ಹೇಳಿದರು. ಸಂಘರ್ಷಕ್ಕಿಂತ ವ್ಯಾಪಾರಕ್ಕೆ ಆದ್ಯತೆ ನೀಡಬೇಕೆಂದು ಎರಡೂ ರಾಷ್ಟ್ರಗಳನ್ನು ಕೇಳಿಕೊಂಡಿದ್ದೇನೆ ಎಂದು ಅವರು ಹೇಳಿದರು.