ಹೊಸದಿಗಂತ ವರದಿ, ವಿಜಯನಗರ:
ಪಾಕಿಸ್ತಾನ ಮೇಲೆ ಯುದ್ಧ ಗೆದ್ದಿರುವುದರಿಂದ ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಯುದ್ಧದ ಉದ್ದೇಶ ಈಡೇರಿದ್ಯಾ ಎಂದು ಪ್ರಶ್ನಿಸುವ ಮುನ್ನ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಹೊಸಪೇಟೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೫೦ ವರ್ಷಗಳ ಹಿಂದೆಯೇ ಈ ರೀತಿಯ ದಿಟ್ಟ ನಿರ್ಧಾರ ಕೈಗೊಂಡಿದ್ದರೆ, ಇಂದು ಭಾರತ ಯಾವ ಹಂತದಲ್ಲಿರುತ್ತಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿರುವ ತೀರ್ಮಾನಕ್ಕೆ ವಿಶ್ವವೇ ಮೆಚ್ಚುಗೆ ಸೂಚಿಸುತ್ತಿದೆ. ಹೀಗಾಗಿ ಎಲ್ಲರೂ ದೇಶದ ಅಖಂಡತೆ, ಸಾರ್ವಭೌಮ ಹಾಗೂ ಸುಭದ್ರ ಭಾರತಕ್ಕೆ ಜೊತೆಯಾಗಿ ಹೆಜ್ಜೆಯಿಡಬೇಕು. ಎಲ್ಲವನ್ನೂ ಗೊತ್ತಿರುವಂತಹ ನಾಯಕರು ವಾಸ್ತಾವಂಶವನ್ನು ಅರಿಯದೇ, ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬಾರದು ಎಂದು ಸಚಿವ ಪ್ರಿಯಾಂಕ ಖರ್ಗೆ, ಕೃಷ್ಣಭೈರೇಗೌಡ ವಿರುದ್ಧ ಹರಿಹಾಯ್ದರು.
ಭಾರತ ದಾಳಿಯಲ್ಲಿ ಮೃತರಾದ ಉಗ್ರರ ಅಂತ್ಯಕ್ರಿಯೆಯಲ್ಲಿ ಪಾಕ್ ಸೇನಾಧಿಕಾರಿಗಳು ಪಾಲ್ಗೊಂಡಿದ್ದಾರೆ. ಅವರ ಕುಟುಂಬಕ್ಕೆ ತಲಾ ೧ ಲಕ್ಷ ರೂ. ಹಾಗೂ ನಿವೇಶನ ನೀಡುತ್ತಿದ್ದಾರೆ. ಉಗ್ರನ್ನು ಮುಂದಿಟ್ಟುಕೊAಡು ಆಟ ಆಡುವ ಪಾಕಿಸ್ತಾನಕ್ಕೆ ಮಾನವೀಯತೆ ಇದೆಯೇ. ಆಪರೇಶನ್ ಸಿಂದೂರ ಪರಿಣಾಮ ಪಾಕಿಸ್ತಾನ ಸರ್ವನಾಶವಾಗಿದೆ. ಉಗ್ರರ ದಮನಕ್ಕೆ ಭಾರತದೊಂದಿಗೆ ಕೈಜೋಡಿಸಿದರೆ, ಪಾಕಿಸ್ತಾನದ ಮುಂದಿನ ಪೀಳಿಗೆಗೆ ಕ್ಷೇಮ. ಯಾವತ್ತಿಗೂ ಭಾರತದ ಸಾರ್ವಭೌಮತ್ವವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.