ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢ, ತೆಲಂಗಾಣ ಗಡಿಯಲ್ಲಿ ನಕ್ಸಲರ ವಿರುದ್ಧ ನಡೆದ ಕಾರ್ಯಾಚರಣೆಯ ವೇಳೆ ಭದ್ರತಾ ಪಡೆಗೆ ಸಾಥ್ ನೀಡಿದ್ದ ಸ್ನಿಫರ್ ಶ್ವಾನ ಜೇನುನೊಣಗಳ ದಾಳಿಗೆ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊರ್ಗೋಟಾಲು ಬೆಟ್ಟಗಳಲ್ಲಿ ಏ.27 ರಂದು ನಡೆದ ಅತಿದೊಡ್ಡ ಮಾವೋವಾದಿ ವಿರೋಧಿ ಕಾರ್ಯಾಚರಣೆಯ ವೇಳೆ ಎರಡು ವರ್ಷದ ಹೆಣ್ಣು ನಾಯಿ ರೋಲೋ (Rolo) ಮೇಲೆ ಜೇನುನೊಣಗಳು ದಾಳಿ ನಡೆಸಿದ್ದವು. ದಾಳಿಯಿಂದ ಗಾಯಗೊಂಡಿದ್ದ ರೋಲೋಗೆ ಸ್ಥಳದಲ್ಲಿ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಕರೆತರುವಾಗ, ಮಾರ್ಗ ಮಧ್ಯೆ ಅದು ಸಾವನ್ನಪ್ಪಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ರೋಲೋ, ಸ್ಫೋಟಕಗಳು ಮತ್ತು ಸುಧಾರಿತ ಸ್ಫೋಟಕ ಸಾಧನಗಳನ್ನು (IED) ಪತ್ತೆ ಹಚ್ಚಲು ನೆರವಾಗುತ್ತಿತ್ತು. ಮೇ 11 ರಂದು ಮುಕ್ತಾಯಗೊಂಡ 21 ದಿನಗಳ ಈ ಕಾರ್ಯಾಚರಣೆಯಲ್ಲಿ ರೋಲೋ ಪಾತ್ರ ಬಹಳ ಮುಖ್ಯವಾಗಿತ್ತು. ಸಿಆರ್‌ಪಿಎಫ್ ಡಿಜಿ, ಮರಣೋತ್ತರವಾಗಿ ಶ್ವಾನಕ್ಕೆ ಪದಕವನ್ನು ನೀಡಿದ್ದಾರೆ.
ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಮತ್ತು ಛತ್ತೀಸ್‌ಗಢ ಪೊಲೀಸ್ ಘಟಕಗಳ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ 31 ಮಾವೋವಾದಿಗಳನ್ನು ಹತ್ಯೆಗೈಯ್ಯಲಾಗಿತ್ತು. ಈ ವೇಳೆ ಒಟ್ಟು 18 ಸೈನಿಕರು ಗಾಯಗೊಂಡಿದ್ದರು.