ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ಉಗ್ರರ ನರಮೇಧದ ನಂತರ ಪಾಕ್ ವಿರುದ್ಧ ಭಾರತ ಹಲವು ರೀತಿಯ ಕ್ರಮಗಳನ್ನು ಜರುಗಿಸಿದೆ. ಪಾಕ್ ಧ್ವಜ, ಸರಕುಗಳ ಮಾರಾಟ ನಿಲ್ಲಿಸುವಂತೆ ಇ-ಕಾಮರ್ಸ್ ಕಂಪನಿಗಳಿಗೆ ವಾರ್ನಿಂಗ್ ಸಹ ಕೊಟ್ಟಿದೆ.
ಈ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರೈತರು ಪಾಕಿಸ್ತಾನಕ್ಕೆ ರಫ್ತಾಗುತಿದ್ದ ವೀಳ್ಯದೆಲೆ ಉತ್ಪನ್ನಕ್ಕೆ ಶಾಶ್ವತವಾಗಿ ನಿರ್ಬಂಧ ಹೇರಲು ನಿರ್ಧರಿಸಿದ್ದಾರೆ. ಅಲ್ಲಿಗೆ ಹೆಚ್ಚು ವೀಳ್ಯದೆಲೆ ಕಳಿಸುತ್ತೇವೆ ಆದರೂ ನಮಗೆ ಹಣ ಬೇಡ. ರಫ್ತು ಮಾಡೋದಿಲ್ಲ ಎಂದು ರೈತರು ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ನದಿ ಪಾತ್ರದ ರೈತರಿಂದ ದೆಹಲಿ ವರ್ತಕರು ವೀಳ್ಯದೆಲೆ ಖರೀದಿಸಿ ಪಾಕಿಸ್ತಾನಕ್ಕೆ ರಫ್ತು ಮಾಡುತಿದ್ದರು. ಆದರೀಗ ನಮಗೆ ನಷ್ಟವಾದರೂ ಪರ್ವಾಗಿಲ್ಲ ಪಾಕಿಸ್ತಾನಕ್ಕೆ ವೀಳ್ಯದೆಲೆ ಕಳುಹಿಸುವುದನ್ನ ನಿರ್ಬಂಧ ಮಾಡ್ತೀವಿ ಅಂತ ಒಕ್ಕೊರಲಿನಿಂದ ಹೇಳ್ತಿದ್ದಾರೆ.
ಹೊನ್ನಾವರದ ಶರಾವತಿ ನದಿ ತೀರ ಭಾಗದಲ್ಲಿ ಬೆಳೆಯುವ ವೀಳ್ಯದೆಲೆ ದೇಶ-ವಿದೇಶಗಳಲ್ಲೂ ಹೆಸರುವಾಸಿ. ʻರಾಣಿ ವೀಳ್ಯದೆಲೆʼ ಎಂದೇ ಪ್ರಸಿದ್ಧಿ ಪಡೆದಿರುವ ಇಲ್ಲಿನ ವೀಳ್ಯದೆಲೆ ಹೆಚ್ಚು ಕಾಲ ಬಾಳಿಕೆ, ವಿಶೇಷ ಕಾರ ಮತ್ತು ಸ್ವಾದ ಹೊಂದಿದೆ. ಈ ವೀಳ್ಯೆದೆಲೆಗೆ ಪಾಕಿಸ್ತಾನವೇ ದೊಡ್ಡ ಮಾರುಕಟ್ಟೆಯಾಗಿದೆ.