ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಎರಡು ವರ್ಷವಾಗಿದೆ. ಆದರೆ ಮದ್ಯ ಪ್ರಿಯರಿಗೆ ಈಗಾಗಲೇ 3ನೇ ಬಾರಿ ದರ ಏರಿಕೆಯ ಹೊಡೆತ ತಗುಲಿದೆ.
ಅಬಕಾರಿ ಇಲಾಖೆ ಇಂದಿನಿಂದಲೇ ನೂತನ ದರಗಳನ್ನು ಜಾರಿಗೆ ತರುವ ಮೂಲಕ, ಮದ್ಯದ ಬೆಲೆ ಮತ್ತೆ ಏರಿಕೆಯಾಗಿದೆ. ಒಂದು ಕ್ವಾರ್ಟರ್ ಮೇಲೆ ಸರಾಸರಿ ₹10 ರಿಂದ ₹25 ದರ ಹೆಚ್ಚಳವಾಗಲಿದೆ. ಹೊಸ ದರ ಏರಿಕೆ ಇಂದಿನಿಂದಲೇ ಅನ್ವಯವಾಗಲಿದೆ.
ಈ ಹಿಂದೆಯೇ ಎರಡು ಬಾರಿ ಐಎಂಎಲ್ ಮದ್ಯದ ದರಗಳನ್ನು ಹೆಚ್ಚಿಸಿದ್ದ ಸರ್ಕಾರ, ಈಗ 2024-25ನೇ ಹಣಕಾಸು ವರ್ಷದಲ್ಲಿ ಅಬಕಾರಿ ಇಲಾಖೆಗಾಗಿ ನಿಗದಿಪಡಿಸಿರುವ ₹40,000 ಕೋಟಿ ಟಾರ್ಗೆಟ್ ತಲುಪಿಸಲು ಮತ್ತೊಂದು ದರ ಏರಿಕೆಯ ಮಾರ್ಗವನ್ನು ಆರಿಸಿದೆ. ಈ ಬಾರಿಯ ಬಜೆಟ್ನಲ್ಲಿ ಮೌಲ್ಯಮಾಪನ ಆದಾಯದ ಗುರಿ ಹಿಂದಿನ ವರ್ಷಕ್ಕಿಂತ ₹1,400 ಕೋಟಿ ಹೆಚ್ಚಾಗಿದೆ.
ಒಂದು ಕ್ವಾರ್ಟರ್ ಮೇಲೆ ಸರಾಸರಿ ₹10 ರಿಂದ ₹25, ಒಂದು ಫುಲ್ ಬಾಟಲ್ ಮೇಲೆ ₹50 ರಿಂದ ₹100 ದರ ಏರಿಕೆ ಜಾರಿ. ಈ ದರಗಳು ಎಂಆರ್ಪಿ ದರಗಳಾಗಿದ್ದು, ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಹೆಚ್ಚಿನ ಮೌಲ್ಯ ವಸೂಲಾಗುವ ಸಾಧ್ಯತೆ ಇದೆ. ಅಲ್ಲಿ ಹೆಚ್ಚುವರಿ ₹10 ರಿಂದ ₹15 ವರೆಗೆ ಮೌಲ್ಯ ಹೆಚ್ಚಾಗಲಿದೆ. ಮದ್ಯದ ದರ ಏರಿಕೆಯಿಂದ ಸಾಮಾನ್ಯ ಗ್ರಾಹಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.