ಹೊಸದಿಗಂತ ವರದಿ ವಿಜಯನಗರ:
ಸಚಿವ ಸಂಪುಟ ಸೇರಲು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಒಂದು ಲಿಜಬಲ್ ಅತಿ ಶೀಘ್ರದಲ್ಲೇ ಸಂಪುಟಕ್ಮೆ ಸೇರ್ಪಡೆಯಾಗುವರು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಹೊಸಪೇಟೆಯಲ್ಲಿ ಮೇ ೨೦ ರಂದು ಆಯೋಜಿಸಿರುವ ಸರ್ಕಾರದ ಸಾಧನಾ ಸಮಾವೇಶದ ಪೂರ್ವ ಸಿದ್ಧತೆಗಳನ್ನು ವೀಕ್ಷಣೆಗೆ ಆಗಮಿಸಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಂದಾಯ ಇಲಾಖೆಯ ಕಂದಾಯ ಗ್ರಾಮಗಳು, ೧ ಲಕ್ಣ ಜನರಿಗೆ ಹಕ್ಕು ಪತ್ರಗಳ ಸಮರ್ಪಣೆ ಮಾಡಲಾಗುವುದು. ಜೊತೆಗೆ ಚುನಾವಣಾ ಸಂದರ್ಭದಲ್ಲಿ ಭರವಸೆ ಕೊಟ್ಟಂತೆ ಐದು ಗ್ಯಾರೆಂಟಿಗಳನ್ನು ಜನರಿಗೆ ಒದಗಿಸಿದ್ದೇವೆ. ಜೊತೆಗೆ ವಿಜಯನಗರದಲ್ಲಿ ವಿಜಯ ಇದೆ ಎಂಬ ಕಾರಣಕ್ಕೆ ಸರಕಾರದ ಎರಡು ವರ್ಷಗಳ ಸಾಧನೆ ಸಮಾವೇಶವನ್ನು ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾಂಗ್ರೆಸ್ ನಲ್ಲಿ ಯಾವುದೇ ಬಣಗಳಿಲ್ಲ. ನಮ್ಮಲ್ಲಿ ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಇದೆ. ಕಾಂಗ್ರೆಸ್ ನಲ್ಲಿ ಬಣ ರಾಜಕಾರಣ ಎಂಬುದಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಕಾಂಗ್ರೆಸ್ ಒಂದೇ ಬಣ ಎಂದರು.
ಈ ಭಾಗದ ಬಹು ವರ್ಷಗಳ ಬೇಡಿಕೆಯಾಗಿರುವ ತುಂಗಭದ್ರಾ ಜಲಾಶಯದ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ. ಟಿ.ಬಿ.ಡ್ಯಾಂ ಗೇಟ್ ಗಳ ಬದಲಾವಣೆ ಕುರಿತು ಈಗಾಗಲೇ ತಂತ್ರಜ್ಞರು ಪರಿಶೀಲಿಸಿದ್ದಾರೆ. ಮೂರೂ ರಾಜ್ಯಗಳ ಮಧ್ಯೆ ಚರ್ಚೆ ಹಂತದಲ್ಲಿದೆ ಎಂದರು.
ಹೊಸಪೇಟೆಯಲ್ಲಿ ಕಳೆದ ಎರಡು ವರ್ಷಗಳಿಂದ ಮಹತ್ವದ ಯೋಜನೆ ಜಾರಿಯಾಗಿಲ್ಲ ಎಂಬ ಕೊರಗು ಇದೆ. ನೂತನ ಜಿಲ್ಲೆಗೆ ಶಕ್ತಿ ತುಂಬಲೆಂದೇ ಸರ್ಕಾರದ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದ ಅವರು, ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಸರ್ಕಾರದಿಂದ ಮಾಡಲು ಸಾಧ್ಯವಿಲ್ಲ. ಯಾರಾದರೂ ಖಾಸಗಿಯವರೇ ಮಾಡಬೇಕು ಎಂದು ಪ್ರತಿಕ್ರಿಯಿಸಿದರು.
ಈ ಸಂದರ್ಭದಲ್ಲಿ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕರಾದ ಬಿ.ನಾಗೇಂದ್ರ, ಜಿ.ಎಸ್.ಪಾಟೀಲ್, ಹಂಪನಗೌಡ ಬಾದರ್ಲಿ, ಎನ್.ವೈ.ಗೋಪಾಲಕೃಷ್ಣ, ಎ.ವಸಂತ ಕುಮಾರ್, ಸಲೀಂ ಅಹಮ್ಮದ್ ಇದ್ದರು.