ನಾನ್‌ಸ್ಟಿಕ್ ಪ್ಯಾನ್‌ಗಳು ಇಂದು ಬಹುತೇಕರ ಮನೆಯಲ್ಲಿ ದಿನನಿತ್ಯದ ಅಡುಗೆಗೆ ಬಳಸಲಾಗುತ್ತಿವೆ. ಆಹಾರ ಸುಲಭವಾಗಿ ಅಂಟದಂತೆ ಮಾಡುವುದರಿಂದ ಮತ್ತು ಸ್ವಚ್ಛಗೊಳಿಸಲು ಸುಲಭವಾಗಿರುವುದರಿಂದ ಇದು ಬಹಳ ಜನಪ್ರಿಯವಾಗಿವೆ. ಆದರೆ ಈ ಪ್ಯಾನ್ ಗಳಲ್ಲಿ ಗೀರು ಬಿದ್ದರೆ ಅಥವಾ ಅದರ ಮೇಲ್ಮೈ ಲೇಪನ ಹಾನಿಯಾದರೆ, ಅದನ್ನು ಬಳಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.
ಟೆಫ್ಲಾನ್ ಲೇಪಿತ ಪ್ಯಾನ್ ಮೇಲೆ ಒಂದು ಗೀರು 9,000 ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಆಹಾರಕ್ಕೆ ಬಿಡುಗಡೆ ಮಾಡುತ್ತದೆ. ಗೀರು ಹೆಚ್ಚಾಗ್ತಿದ್ದಂತೆ ಮೈಕ್ರೋಪ್ಲಾಸ್ಟಿಕ್ ಕಣ ಆಹಾರ ಸೇರುವ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಪ್ರತಿ ಬಾರಿ ನೀವು ಅಡುಗೆ ಮಾಡುವ ಸಮಯದಲ್ಲಿ 2 ಮಿಲಿಯನ್ ಮೈಕ್ರೋಪ್ಲಾಸ್ಟಿಕ್ ಕಣ ಬಿಡುಗಡೆಯಾಗುವ ಅಪಾಯವಿದೆ.
ಈ ಮೈಕ್ರೋಪ್ಲಾಸ್ಟಿಕ್ ಗಳು ಬಹುತೇಕ ಅಗೋಚರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತವೆ. ಇದರಿಂದಾಗಿ ಅವುಗಳ ಪರಿಣಾಮ ಹೆಚ್ಚು ಮಾರಕವಾಗುತ್ತದೆ.
ಮೈಕ್ರೋಪ್ಲಾಸ್ಟಿಕ್ ಕಣಗಳು ಜೀರ್ಣಾಂಗ ವ್ಯವಸ್ಥೆಯ ಮೂಲಕ ಹಾದುಹೋಗುವುದಿಲ್ಲ. ಬದಲಾಗಿ, ಅವು ರಕ್ತಪ್ರವಾಹಕ್ಕೆ ಪ್ರವೇಶಿಸಿ, ಯಕೃತ್ತು ಮತ್ತು ಮೂತ್ರಪಿಂಡಗಳಂತಹ ಪ್ರಮುಖ ಅಂಗಗಳಲ್ಲಿ ಅಡಗಿಕೊಳ್ಳುತ್ತವೆ.
ಮೈಕ್ರೋಪ್ಲಾಸ್ಟಿಕ್ ದೇಹ ಸೇರುವುದರಿಂದ ಹಾರ್ಮೋನ್ ಕೆಲಸಕ್ಕೆ ಅಡ್ಡಿಯಾಗುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಇದು ದುರ್ಬಲಗೊಳಿಸುತ್ತದೆ. ಬಂಜೆತನ, ಚಯಾಪಚಯ ಅಸ್ವಸ್ಥತೆಗಳು ಮತ್ತು ಕೆಲವು ಕ್ಯಾನ್ಸರ್ಗಳ ಅಪಾಯವನ್ನು ಹೆಚ್ಚಿಸುವುದು ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆ ಕಾಡುತ್ತದೆ ಎಂದು ಅಧ್ಯಯನ ಹೇಳಿದೆ.