ಜಗತ್ತಿನ ಮುಂದೆ ಪಾಕ್​ ಬಣ್ಣ ಬಯಲು ಮಾಡಲು ಮುಂದಾದ ಭಾರತ: ಶಶಿ ತರೂರ್ ಸಹಿತ ಸರ್ವಪಕ್ಷ ನಿಯೋಗ ಕಳುಹಿಸಲು ಪ್ಲಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಉಗ್ರರ ವಿರುದ್ಧ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನುಶ್ಲಾಘಿಸಿದ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರಿಗೆ ಕೇಂದ್ರ ಸರ್ಕಾರ ಮಹತ್ವದ ಜವಾಬ್ದಾರಿ ನೀಡಲು ಮುಂದಾಗಿದೆ.

ಮುಂದಿನ ವಾರ ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಬಹಿರಂಗಪಡಿಸಲು ವಿವಿಧ ದೇಶಗಳಿಗೆ ಭೇಟಿ ನೀಡಲಿರುವ ಸರ್ವಪಕ್ಷ ನಿಯೋಗದ ಸದಸ್ಯರನ್ನಾಗಿ ಶಶಿ ತರೂರ್‌ ಅವರನ್ನು ಹೆಸರಿಸಲಾಗಿದೆ. ಶಶಿ ತರೂರ್ ನೇತೃತ್ವದ ನಿಯೋಗವು ಮೊದಲು ಅಮೆರಿಕ ಮತ್ತು ನಂತರ ಯುರೋಪ್‌ಗೆ ಪ್ರಯಾಣ ಬೆಳೆಸಲಿದೆ ಎಂದು ಮೂಲಗಳು ತಿಳಿಸಿವೆ.

ತರೂರ್ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿರುವುದರಿಂದ ಅಮೆರಿಕ ಮತ್ತು ಯುರೋಪ್‌ಗೆ ತೆರಳುವ ಬಹುಪಕ್ಷಗಳ ನಿಯೋಗವನ್ನು ಮುನ್ನಡೆಸಲು ಸರ್ಕಾರ ಅವರನ್ನು ಸಂಪರ್ಕಿಸಿದೆ. ತರೂರ್ ಜತೆಗೆ ಇತರ ವಿರೋಧ ಪಕ್ಷದ ಸಂಸದರು ಸಹ ನಿಯೋಗದ ಭಾಗವಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಭಯೋತ್ಪಾದನೆ ವಿರುದ್ಧ ಜಾಗತಿಕ ಮಟ್ಟದಲ್ಲಿ ಭಾರತದ ನಡೆಯನ್ನು ಸಮರ್ಥಿಸಿಕೊಳ್ಳಲು ವಿವಿಧ ಪಕ್ಷಗಳ 5-6 ಸಂಸದರನ್ನು ಒಳಗೊಂಡ ಬಹುಪಕ್ಷೀಯ ನಿಯೋಗಗಳನ್ನು ಕೇಂದ್ರ ರಚಿಸುತ್ತಿದೆ .

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾಗತಿಕ ವೇದಿಕೆಗೆ ಕಳುಹಿಸುತ್ತಿರುವ ಸರ್ವಪಕ್ಷ ನಿಯೋಗವು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಬಹಿರಂಗಪಡಿಸುವ ರಾಜತಾಂತ್ರಿಕತೆಯ ಪ್ರಮುಖ ಭಾಗ ಎನಿಸಿಕೊಂಡಿದೆ. ಸುಮಾರು 10 ದಿನಗಳ ಕಾಲ ಈ ಪ್ರವಾಸ ನಡೆಯಲಿದೆ.

ಸರ್ಕಾರವು ವಿರೋಧ ಪಕ್ಷಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ ಹಲವು ಸಂಸದರನ್ನು ನಿಯೋಗದ ಭಾಗವಾಗಲು ಕೇಳಿಕೊಂಡಿದೆ. ಹಲವು ಪಕ್ಷಗಳು ಈಗಾಗಲೇ ತಮ್ಮ ಪ್ರತಿನಿಧಿಗಳನ್ನು ಕಳುಹಿಸಲು ಅನುಮೋದನೆ ನೀಡಿವೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!