ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ಪ್ರವಾಸಕ್ಕೆ ಭಾರತ-ಎ ತಂಡ ಪ್ರಕಟವಾಗಿದೆ. ಬಿಸಿಸಿಐ 18 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ.
ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆಯುವ 2 ಪ್ರಥಮ ದರ್ಜೆ ಪಂದ್ಯಕ್ಕೆ ಭಾರತ ಎ ತಂಡದ ನಾಯಕತ್ವವನ್ನು ಅನುಭವಿ ಬ್ಯಾಟ್ಸ್‌ಮನ್ ಅಭಿಮನ್ಯು ಈಶ್ವರನ್ಅವರಿಗೆ ವಹಿಸಲಾಗಿದ್ದು, ನಿರೀಕ್ಷೆಯಂತೆ ಕನ್ನಡಿಗ ಕರುಣ್ ನಾಯರ್ಗೆ ಅವಕಾಶ ನೀಡಲಾಗಿದೆ. ಇವರಲ್ಲದೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಕೂಡ ತಂಡಕ್ಕೆ ಮರಳಿದ್ದಾರೆ.
ಈ ಸರಣಿಗೆ ಟೀಂ ಇಂಡಿಯಾದ ಕೆಲವು ಖಾಯಂ ಆಟಗಾರರನ್ನು ಸಹ ಆಯ್ಕೆ ಮಾಡಲಾಗಿದೆ. ಇದರಲ್ಲಿ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಪ್ರಮುಖ ಹೆಸರುಗಳು. ಆದರೆ ಶುಭ್ಮನ್ ಗಿಲ್ ಮೊದಲ ಪಂದ್ಯವನ್ನು ಆಡುತ್ತಿಲ್ಲ. ಜೂನ್ 6 ರಿಂದ ಆರಂಭವಾಗಲಿರುವ ಎರಡನೇ ಪಂದ್ಯದಲ್ಲಿ ಅವರು ಕಣಕ್ಕಿಳಿಯಲಿದ್ದಾರೆ.
ಗುಜರಾತ್ ಟೈಟನ್ಸ್ ತಂಡ ಐಪಿಎಲ್ ಫೈನಲ್ ರೇಸ್ನಲ್ಲಿರುವ ಕಾರಣ ಗಿಲ್ರನ್ನು ಮೊದಲ ಪಂದ್ಯಕ್ಕೆ ಆಯ್ಕೆ ಮಾಡಲಾಗಿಲ್ಲ. ಗಿಲ್ ಮಾತ್ರವಲ್ಲದೆ ಗುಜರಾತ್ ತಂಡದ ಮತ್ತೊಬ್ಬ ಆಟಗಾರ ಸಾಯಿ ಸುದರ್ಶನ್ ಅವರನ್ನು ಸಹ ಎರಡನೇ ಪಂದ್ಯಕ್ಕೆ ಆಯ್ಕೆ ಮಾಡಲಾಗಿದೆ. ಶಾರ್ದೂಲ್ ಠಾಕೂರ್ ಕೂಡ ತಂಡಕ್ಕೆ ಆಯ್ಕೆಯಾಗಿದ್ದು, ಅವರು ಮೊದಲ ಪಂದ್ಯದಲ್ಲೇ ಕಣಕ್ಕಿಳಿಯಲಿದ್ದಾರೆ. ಇವರಲ್ಲದೇ ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಆಕಾಶ್ ದೀಪ್, ಧ್ರುವ ಜುರೆಲ್ ಮತ್ತು ಸರ್ಫರಾಜ್ ಖಾನ್ ಅವರಿಗೂ ಅವಕಾಶ ನೀಡಲಾಗಿದೆ.
ಇಂಗ್ಲೆಂಡ್ ಪ್ರವಾಸಕ್ಕೆ ಭಾರತ-ಎ ತಂಡ
ಅಭಿಮನ್ಯು ಈಶ್ವರನ್ (ನಾಯಕ), ಯಶಸ್ವಿ ಜೈಸ್ವಾಲ್, ಕರುಣ್ ನಾಯರ್, ಧ್ರುವ್ ಜುರೆಲ್ (ಉಪನಾಯಕ ಮತ್ತು ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಮಾನವ್ ಸುತಾರ್, ಶಮ್ಸ್ ಮುಲಾನಿ, ಮುಕೇಶ್ ಕುಮಾರ್, ಆಕಾಶ್ ದೀಪ್, ರುತುರಾಜ್ ಗಾಯಕ್ವಾಡ್, ಸರ್ಫರಾಜ್ ಖಾನ್, ಹರ್ಷಿತ್ ರಾಣಾ, ತುಷಾರ್ ದೇಶಪಾಂಡೆ, ಹರ್ಷ್ ದುಬೆ.