ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನವನ್ನು ಬೆಂಬಲಿಸಿದ ಟರ್ಕಿ ಹೊಡೆತರ ಮೇಲೊಂದು ಹೊಡೆತ ಬೀಳುತ್ತಿದ್ದು, ಟರ್ಕಿ ಜೊತೆಗಿನ ಎಲ್ಲಾ ಸಂಬಂಧ ಕಡಿದೊಳ್ಳಲು ಭಾರತೀಯರು ಬಯಸುತ್ತಿದ್ದಾರೆ.
ಹಲವು ಬಹಿಷ್ಕಾರ, ನಿರ್ಬಂಧ ಬಳಿಕ ಇದೀಗ ರೂರ್ಕಿಯ ಐಐಟಿ ಸಂಸ್ಥೆ, ಟರ್ಕಿಯ ಇನೊನು ವಿಶ್ವವಿದ್ಯಾಲಯದ ಜೊತೆ ಮಾಡಿಕೊಂಡಿದ್ದ ಒಪ್ಪಂದ ರದ್ದುಗೊಳಿಸಿದೆ.
ಈ ಕುರಿತು ಐಐಟಿ ರೂರ್ಕಿ ಪ್ರಕಟಣೆಯಲ್ಲಿ ಹೇಳಿದ್ದು,ಟರ್ಕಿ ಜೊತೆ ಐಐಟಿ ರೂರ್ಕಿ ಕೆಲ ಒಪ್ಪಂದ ಮಾಡಿಕೊಂಡಿತ್ತು. ಶೈಕ್ಷಣಿಕ, ಸಂಶೋಧನೆ ಹಾಗೂ ಬೋಧಕ ಸಿಬ್ಬಂದಿಗಳು, ವಿದ್ಯಾರ್ಥಿಗಳ ವಿನಿಮಯ ಮೂಲಕ ಕಲಿಕಾ ಸಾಮರ್ಥ್ಯ ವೃದ್ಧಿಸುವ ಶೈಕ್ಷಣಿಕ ಒಪ್ಪಂದವನ್ನು ರದ್ದು ಮಾಡಲಾಗಿದೆ ಎಂದು ಐಐಟಿ ರೂರ್ಕಿ ಹೇಳಿದೆ. ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಸ್ಪಷ್ಟಪಡಿಸಿದೆ.
ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯ (MANUU) ಟರ್ಕಿಯ ಯೂನಸ್ ಎಮ್ರೆ ಸಂಸ್ಥೆಯೊಂದಿಗಿನ ಶೈಕ್ಷಣಿಕ ಒಪ್ಪಂದವನ್ನು (MoU) ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮೊಹಮ್ಮದ್ ಮುಸ್ತಫಾ ಅಲಿ ತಿಳಿಸಿದ್ದಾರೆ.
ಭಾರತ-ಪಾಕ್ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆಗಳಿಗೆ ಟರ್ಕಿ ಬೆಂಬಲ ನೀಡಿರುವುದನ್ನು ವಿರೋಧಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜನವರಿ 2, 2024 ರಂದು, MANUU ಯೂನಸ್ ಎಮ್ರೆ ಸಂಸ್ಥೆಯೊಂದಿಗೆ ಐದು ವರ್ಷಗಳ ಅವಧಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು, ಇದರ ಅಡಿಯಲ್ಲಿ MANUU ನ ಭಾಷಾಶಾಸ್ತ್ರ ಮತ್ತು ಭಾರತೀಯ ಶಾಸ್ತ್ರ ವಿಭಾಗದಲ್ಲಿ ಟರ್ಕಿಶ್ ಭಾಷೆಯಲ್ಲಿ ಡಿಪ್ಲೊಮಾವನ್ನು ಪ್ರಾರಂಭಿಸಲಾಗಿತ್ತು.