ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯಾ ಮೈತ್ರಿಕೂಟವು ಹಳಿತಪ್ಪಿರುವಂತೆ ಕಂಡು ಬರುತ್ತಿದ್ದು, ದುರ್ಬಲವಾಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಕಳವಳ ವ್ಯಕ್ತಪಡಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಮತ್ತು ಮೃತ್ಯುಂಜಯ್ ಸಿಂಗ್ ಯಾದವ್ ಅವರು ಬರೆದ ‘Contesting Democratic Deficit: An Inside Story of the 2024 Elections’ ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಮೃತ್ಯುಂಜಯ್ ಸಿಂಗ್ ಯಾದವ್ ಹೇಳಿದಂತೆ ಇಂಡಿಯಾ ಒಕ್ಕೂಟದ ಭವಿಷ್ಯವು ಅಷ್ಟೊಂದು ಉಜ್ವಲವಾಗಿಲ್ಲ. ಮೈತ್ರಿಕೂಟದ ಒಗ್ಗಟ್ಟು ಹಾಗೆಯೇ ಇದೆಯೇ ಎಂಬುದರ ಬಗ್ಗೆ ಖಚಿತತೆ ಇಲ್ಲ. 2024ರ ಲೋಕಸಭಾ ಚುನಾವಣೆಗೂ ಮುನ್ನ ವಿರೋಧಪಕ್ಷಗಳೆಲ್ಲಾ ಒಟ್ಟಾಗಿ ಮೈತ್ರಿಕೂಟ ರಚಿಸಿ ಒಟ್ಟಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. ಆದರೂ, ಮೋದಿಯೇ ಮತ್ತೆ ಪ್ರಧಾನಿಯಾದರು. ಆ ಸಾರ್ವತ್ರಿಕ ಚುನಾವಣೆಯಲ್ಲಿ ಇಂಡಿಯಾ ಬಣದ ಇತರ ಪಕ್ಷಗಳೊಂದಿಗೆ ಸೀಟು ಹಂಚಿಕೆಯ ಬಗ್ಗೆ ಚರ್ಚಿಸಿದ ಕಾಂಗ್ರೆಸ್ ಸಮಿತಿಯಲ್ಲಿ ಖುರ್ಷಿದ್ ಕೂಡ ಇದ್ದರು. ಹಾಗಾಗಿ ಈ ಬಗ್ಗೆ ಅವರು ಮಾತ್ರ ಉತ್ತರಿಸಬಹುದು. ಇದರ ಹೊರತು ಇಂಡಿಯಾ ಮೈತ್ರಿಕೂಟವು ಸಂಪೂರ್ಣವಾಗಿ ಅಖಂಡವಾಗಿದ್ದರೆ ನನಗೆ ತುಂಬಾ ಸಂತೋಷ. ಆದರೆ, ಅಲ್ಲಿ ಒಗ್ಗಟ್ಟು ಇಲ್ಲ ಎಂಬುದು ಕ್ಷಣಾರ್ಧದಲ್ಲಿ ತಿಳಿದು ಬರುತ್ತದೆಎಂದು ಚಿದಂಬರಂ ಹೇಳಿದ್ದಾರೆ.
ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಬಲಿಷ್ಠ ಸಂಘಟನೆ ಅಂತ ಎಂದು ಹೇಳುವುದರಲ್ಲಿ ಎರಡು ಮಾತಿಲ್ಲ. ಅಲ್ಲದೇ ಅದನ್ನು ಈ ರೀತಿ ಬಹಿಂಗವಾಗಿ ಹೇಳುವುದರಲ್ಲಿ ನನಗೆ ಯಾವುದೇ ಹಿಂಜರಿಕೆ ಕೂಡ ಇಲ್ಲ ಎಂದು ಹೇಳಿದ್ದಾರೆ.
ಯಾವುದೇ ರಾಜಕೀಯ ಪಕ್ಷವು ಬಿಜೆಪಿಯಷ್ಟು ಬಲಿಷ್ಠವಾಗಿ ಸಂಘಟಿತವಾಗಿಲ್ಲ. ಅದೊಂದು ಯಂತ್ರದ ರೀತಿಯಲ್ಲಿ ಕೆಲಸ ನಿರ್ವಹಿಸುತ್ತದೆ. ಚುನಾವಣಾ ಆಯೋಗದಿಂದ ಹಿಡಿದು ಪೊಲೀಸ್ ಠಾಣೆಯವರೆಗೆ ಎಲ್ಲವನ್ನೂ ನಿಯಂತ್ರಿಸುವ ಶಕ್ತಿ ಬಿಜೆಪಿಗಿದೆ. ಇದು ವಾಸ್ತವತೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನುಮತಿಸಬಹುದಾದ ಬಲಿಷ್ಠ ಯಂತ್ರವಿದು ಎಂದು ಬಿಜೆಪಿಯ ಸಂಘಟನಾ ಶಕ್ತಿಯನ್ನು ಕೊಂಡಾಡಿದರು.