ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಸೇನೆ ಮತ್ತು ಐಎಸ್‌ಐಗೆ ಮಾಹಿತಿ ಒದಗಿಸಿದ ಆರೋಪದ ಮೇಲೆ ಹರಿಯಾಣದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಮಸ್ತ್‌ಗಢ ಚೀಕಾ ಗ್ರಾಮದ ದೇವೇಂದ್ರ ಸಿಂಗ್ (25) ಬಂಧಿತ ಯುವಕ. ದೇವೇಂದ್ರ ಸಿಂಗ್ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ಸಂಪರ್ಕದಲ್ಲಿರುವುದಾಗಿ ಬಹಿರಂಗಪಡಿಸಿದ್ದಾನೆ. ದೇವೇಂದ್ರ ಸಿಂಗ್ ಆಪರೇಷನ್ ಸಿಂದೂರ ಕಾರ್ಯಾಚರಣೆಯ ಬಗ್ಗೆಯೂ ಐಎಸ್‌ಐಗೆ ಕಾಲಕಾಲಕ್ಕೆ ಮಾಹಿತಿಯನ್ನು ರವಾನಿಸಿದ್ದಾನೆ. ಗುಪ್ತಚರ ಮಾಹಿತಿ ಆಧಾರದ ಮೇಲೆ ಕೈಥಲ್ ಜಿಲ್ಲಾ ಪೊಲೀಸರು ದೇವೇಂದ್ರ ಸಿಂಗ್‌ನನ್ನು ಬಂಧಿಸಿದ್ದಾರೆ ಎಂದು ಡಿಎಸ್‌ಪಿ ಕೈಥಲ್ ವೀರಭನ್ ಹೇಳಿದ್ದಾರೆ.
ದೇವೇಂದ್ರ ಸಿಂಗ್ ಪಂಜಾಬ್‌ನ ಕಾಲೇಜುವೊಂದರಲ್ಲಿ ಎಂಎ ರಾಜ್ಯಶಾಸ್ತ್ರ ವಿದ್ಯಾರ್ಥಿಯಾಗಿದ್ದು, ಕಳೆದ ವರ್ಷ ನವೆಂಬರ್‌ನಲ್ಲಿ ಪಾಕಿಸ್ತಾನದ ನಂಕಾನಾ ಸಾಹಿಬ್ ಗುರುದ್ವಾರಕ್ಕೆ ತೀರ್ಥಯಾತ್ರೆಗೆಂದು ಹೋಗಿದ್ದ. ಈ ವೇಳೆ ಪಾಕಿಸ್ತಾನಿ ಗುಪ್ತಚರ ಏಜೆಂಟ್‌ಗಳು ಈತನೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಅಂದಿನಿಂದ ಪಾಕ್ ಐಎಸ್‌ಐಗೆ ದೇವೇಂದ್ರ ಸಿಂಗ್ ನಿರಂತರವಾಗಿ ಮಾಹಿತಿ ನೀಡುತ್ತಿದ್ದ ಎಂದು ವರದಿಗಳು ತಿಳಿಸಿವೆ.