ಐತಿಹಾಸಿಕ ಕ್ಷಣಕ್ಕೆ ಸಜ್ಜಾದ ಇಸ್ರೋ: ನಾಳೆ ಶ್ರೀಹರಿಕೋಟದಿಂದ ಉಪಗ್ರಹ ಉಡಾವಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ನಾಳೆ (ಮೇ 18) ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PSLV-C61/EOS-09 ಕಾರ್ಯಾಚರಣೆಯೊಂದಿಗೆ ತನ್ನ 101ನೇ ಉಪಗ್ರಹವನ್ನು ಉಡಾವಣೆ ಮಾಡಲು ಸಜ್ಜಾಗಿದೆ.

ಈ ಕಾರ್ಯಾಚರಣೆಯಡಿಯಲ್ಲಿ ವಿಜ್ಞಾನಿಗಳು ಭಾರತದ ಎಲ್ಲಾ ಹವಾಮಾನ ಭೂ ವೀಕ್ಷಣಾ ಸಾಮರ್ಥ್ಯ ಹೊಂದಿರುವ ಉಪಗ್ರಹವನ್ನು ಸೂರ್ಯನ ಸಿಂಕ್ರೊನಸ್ ಧ್ರುವ ಕಕ್ಷೆಯಲ್ಲಿ(SPO) ಇರಿಸಲಿದ್ದಾರೆ.

ನಾಳೆ ಬೆಳಗ್ಗೆ 5.59ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಉಪಗ್ರಹ ಉಡಾವಣೆ ನಿಗದಿಯಾಗಿದ್ದು, ಇಸ್ರೋದ ಅಧಿಕೃತ ​ಯೂಟ್ಯೂಬ್​ ಚಾನೆಲ್​ನಲ್ಲಿ ಇದರ ನೇರಪ್ರಸಾರ ವೀಕ್ಷಿಸಬಹುದಾಗಿದೆ.ಇಸ್ರೋ ಮಾಹಿತಿಯ ಪ್ರಕಾರ, ಉಡಾವಣಾ ವಾಹನವು 44.5 ಮೀಟರ್ ಎತ್ತರವಾಗಿದೆ ಮತ್ತು 321 ಟನ್‌ಗಳಷ್ಟು ಲಿಫ್ಟ್ ಆಫ್ ದ್ರವ್ಯರಾಶಿಯನ್ನು ಹೊಂದಿದೆ.

ಈ ಉಪಗ್ರಹವು ಸಿಂಥೆಟಿಕ್ ಅಪರ್ಚರ್ ರಾಡಾರ್ (SAR) ಅನ್ನು ಹೊಂದಿದ್ದು, 1696.24 ಕೆಜಿ. ತೂಕವಿದೆ. ಇದರ ಜೀವಿತಾವಧಿ ಐದು ವರ್ಷಗಳಾಗಿದ್ದು, ಸಿ-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಾಡಾರ್​ನಿಂದ (SAR) ಸಜ್ಜುಗೊಂಡಿದ್ದು, ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಹಗಲು-ರಾತ್ರಿ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳ ಸೆರೆಹಿಡಿಯಲು ಅನುವು ಮಾಡಿಕೊಡಲಿದೆ.

EOS-09ನ ಮುಖ್ಯ ಉದ್ದೇಶ ಕೃಷಿ, ಅರಣ್ಯ ಮೇಲ್ವಿಚಾರಣೆ, ವಿಪತ್ತು ನಿರ್ವಹಣೆ, ನಗರ ಯೋಜನೆ ಮತ್ತು ರಾಷ್ಟ್ರೀಯ ಭದ್ರತೆಯಂತಹ ಕ್ಷೇತ್ರಗಳಿಗೆ ನೆರವಾಗುವುದಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಂತಹ ಇತ್ತೀಚಿನ ಭದ್ರತಾ ಘಟನೆಗಳ ಮೇಲ್ವಿಚಾರಣೆ ಮಾಡಲಿದೆ. ಸೂಕ್ಷ್ಮ ಗಡಿಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ಕಣ್ಗಾವಲು ಹೆಚ್ಚಿಸುವ ನಿಟ್ಟಿನಲ್ಲಿ ಉಪಗ್ರಹ ಕಾರ್ಯ ನಿರ್ವಹಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!