ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ಮುಲುಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ನಿಷೇಧಿತ ಮಾವೋವಾದಿ ಸಂಘಟನೆಯ 20 ಸದಸ್ಯರನ್ನು ಸೆರೆ ಹಿಡಿದಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಮುಲುಗು ಜಿಲ್ಲೆಯ ಎಸ್‌ಪಿ ಶಬರೀಷ್ ಪಿ., ಸೆರೆಸಿಕ್ಕ ಮಾವೋವಾದಿಗಳ ಪೈಕಿ ಓರ್ವ ಡಿವಿಷನ್ ಕಮಿಟಿ ಸದಸ್ಯ, 5 ಮಂದಿ ಏರಿಯಾ ಕಮಿಟಿ ಸದಸ್ಯರು ಸೇರಿದ್ದಾರೆ. ವಾಹನ ತಪಾಸಣೆ, ವೆಂಕಟಪುರಂ, ವಜೀಡು, ಕನ್ನೈಗುಡೆಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆ ಶೋಧ ಕಾರ್ಯದ ಮೂಲಕ 20 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿರುವ ಕರ್ರೆಗುಟ್ಟ ಬೆಟ್ಟಗಳಲ್ಲಿ ಸಿಆರ್‌ಪಿಎಫ್ ಮತ್ತು ಛತ್ತೀಸ್‌ಗಢ ಪೊಲೀಸರು ಇತ್ತೀಚೆಗೆ ದೊಡ್ಡ ಪ್ರಮಾಣದ ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಇದಾದ ಬಳಿಕ ಕರ್ರೆಗುಟ್ಟದಲ್ಲಿ ಆಶ್ರಯ ಪಡೆದಿದ್ದ ಮಾವೋವಾದಿಗಳು ಬೇರೆ ಬೇರೆ ಗುಂಪುಗಳಾಗಿ ಅಲ್ಲಿಂದ ವಿವಿಧ ಸ್ಥಳಗಳಿಗೆ ಪಲಾಯನ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ .ಮುಲುಗು ಜಿಲ್ಲೆಗೆ ಮಾವೋವಾದಿಗಳು ಪ್ರವೇಶಿಸುವುದನ್ನು ತಡೆಯಲು ಪೊಲೀಸರು ತಮ್ಮ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಬಂಧಿತ 20 ಮಾವೋವಾದಿಗಳು ತೆಲಂಗಾಣ ಮತ್ತು ಛತ್ತೀಸ್‌ಗಢದಲ್ಲಿ ನಡೆದ ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಬಂಧಿತ ಮಾವೋವಾದಿಗಳಿಂದ ಮೂರು 5.56 ಎಂಎಂ ಐಎನ್‌ಎಸ್‌ಎಎಸ್ ರೈಫಲ್‌ಗಳು, ನಾಲ್ಕು 7.62 ಎಂಎಂ ಎಸ್‌ಎಲ್‌ಆರ್ ರೈಫಲ್‌ಗಳು, ಒಂದು .303 ರೈಫಲ್, ನಾಲ್ಕು 8 ಎಂಎಂ ರೈಫಲ್‌ಗಳು, ಎರಡು ಲೈವ್ ಗ್ರೆನೇಡ್‌ಗಳು ಮತ್ತು ಮ್ಯಾಗಜೀನ್‌ಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.