ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜಗತ್ತಿನ ಮುಂದೆ ಪಾಕಿಸ್ತಾನದ ಮುಖವಾಡ ಕಳಚಲು ಭಾರತದ ಸರ್ಕಾರ ನಿಯೋಜಿಸಲಿರುವ ಏಳು ಸರ್ವ ಪಕ್ಷ ನಿಯೋಗಗಳಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಒಂದನ್ನು ಮುನ್ನಡೆಸಲಿದ್ದಾರೆ.
ಇತ್ತ ಕಾಂಗ್ರೆಸ್ ಪಕ್ಷ ತಾವು ಸೂಚಿಸಿದ್ದ ನಾಲ್ಕು ಸಂಸದರ ಹೆಸರುಗಳನ್ನು ಬಿಟ್ಟು ಶಶಿ ತರೂರ್ ಹೆಸರನ್ನು ಅಂತಿಮಗೊಳಿಸಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿತ್ತು.
ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಶಿ ತರೂರ್, ನನ್ನ ಸಾಮರ್ಥ್ಯ ಅಥವಾ ಕೊರತೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ನನ್ನ ಪಕ್ಷದ ನಾಯಕತ್ವ ಹೊಂದಿದೆ ಮತ್ತು ಅದನ್ನು ವಿವರಿಸುವುದು ಅವರ ಜಬಾಬ್ದಾರಿ ಎಂದು ಭಾವಿಸುತ್ತೇನೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.
ಪಕ್ಷ ನನ್ನ ಹೆಸರು ಸೂಚಿಸದಿರುವ ಕುರಿತು ನಾನು ಯಾವುದೇ ಹೇಳಿಕೆ ನೀಡಲಾರೆ. ನನಗೆ ಈ ಜವಾಬ್ದಾರಿ ವಹಿಸಿರುವುದಕ್ಕೆ ಗೌರವವಿದೆ. ವಿಶ್ವಸಂಸ್ಥೆಯಲ್ಲಾಗಲಿ ಅಥವಾ ಕಾಂಗ್ರೆಸ್ ಪಕ್ಷದಲ್ಲಾಗಲಿ ನನ್ನ ಸುದೀರ್ಘ ಸೇವಾ ಅವಧಿಯಲ್ಲಿ ನನಗೆ ವಹಿಸಲಾದ ಪ್ರತಿಯೊಂದು ಕರ್ತವ್ಯವನ್ನು ಜವಾಬ್ದಾರಿಯಿಂದ ಪೂರೈಸಿದ್ದೇನೆ. ಈ ಜವಾಬ್ದಾರಿಯನ್ನು ಅದೇ ರೀತಿ ಪೂರೈಸುತ್ತೇನೆ ಎಂದು ತಿಳಿಸಿದರು.
ನನ್ನ ಅಭಿಪ್ರಾಯದಲ್ಲಿ, ಪಕ್ಷ ರಾಜಕೀಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ಅರಿತು, ಒಟ್ಟಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ. ಇದು ಏಕತೆ ಮುಖ್ಯವಾದ ಸಮಯದಲ್ಲಿ ರಾಷ್ಟ್ರೀಯ ಏಕತೆಯ ಉತ್ತಮ ಪ್ರತಿಬಿಂಬವಾಗಿದೆ ಎಂದು ಅವರು ಹೇಳಿದರು.