ನಮ್ಮ ದೇಹದಲ್ಲಿ ಕಿಡ್ನಿ (ಮೂತ್ರಪಿಂಡಗಳು) ಅತ್ಯಂತ ಮುಖ್ಯವಾದ ಅವಯವಗಳಾಗಿದ್ದು, ರಕ್ತವನ್ನು ಶುದ್ಧಪಡಿಸುವ ಹಾಗೂ ದೇಹದಲ್ಲಿನ ತ್ಯಾಜ್ಯವಸ್ತುಗಳನ್ನು ಹೊರಹಾಕುವ ಕೆಲಸ ಮಾಡುತ್ತವೆ. ಆದರೆ ನಾವು ದಿನನಿತ್ಯ ಸೇವಿಸುವ ಕೆಲವು ಸಾಮಾನ್ಯ ಔಷಧಿಗಳು ಈ ಕಿಡ್ನಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
ಕೆಲವು ಔಷಧಿಗಳನ್ನು ದೀರ್ಘಕಾಲ ಬಳಸಿದರೆ ಅಥವಾ ಅತಿಯಾಗಿ ಸೇವಿಸಿದರೆ, ಕಿಡ್ನಿಗಳ ಕಾರ್ಯತತ್ಪರತೆಯ ಮೇಲೆ ಕೆಟ್ಟ ಪ್ರಭಾವ ಬೀರಿ, ತೀವ್ರ ಅಥವಾ ದೀರ್ಘಕಾಲಿಕ ಕಿಡ್ನಿ ಹಾನಿಗೆ ಕಾರಣವಾಗಬಹುದು.
ಐಬುಪ್ರೊಫೆನ್ (Ibuprofen):
ಈ ಔಷಧಿ ಒಂದು ನಾನ್-ಸ್ಟೆರಾಯ್ಡಲ್ ಆಂಟಿ-ಇನ್ಫ್ಲಮೇಟರಿ ಡ್ರಗ್ (NSAID). ಅದು ತೀವ್ರವಾದ ನೋವು, ಕೀಲು ನೋವು, ಜ್ವರ ಇತ್ಯಾದಿಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಆದರೆ, ಇದನ್ನು ಹೆಚ್ಚು ದಿನ ಬಳಸಿದರೆ ರಕ್ತನಾಳಗಳಲ್ಲಿ ಒತ್ತಡ ಹೆಚ್ಚಿಸಿ ಕಿಡ್ನಿಗಳಿಗೆ ಹಾನಿಯುಂಟುಮಾಡಬಹುದು ಎಂದು ಹೇಳಲಾಗಿದೆ.
ಡೈಕ್ಲೋಫೆನಾಕ್ (Diclofenac):
ಇದೂ ಒಂದು NSAID ಆಗಿದ್ದು, ಕೀಲು ನೋವು, ಸ್ನಾಯು ನೋವುಗಳಿಗೆ ಸಾಮಾನ್ಯವಾಗಿ ನೀಡಲಾಗುತ್ತದೆ. ಇದನ್ನು ಧೀರ್ಘಕಾಲದವರೆಗೆ ಬಳಸಿದರೆ ಕಿಡ್ನಿಗಳ ಶಕ್ತಿಯನ್ನು ಕಡಿಮೆ ಮಾಡಬಹುದು.
ಏಸಿಇ ಇನ್ಹಿಬಿಟರ್ಸ್ (ACE Inhibitors)
ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಗೆ ನೀಡಲಾಗುವ ಈ ಔಷಧಿಗಳು ಕೆಲವೊಮ್ಮೆ ಕಿಡ್ನಿಗಳ ಕಾರ್ಯವನ್ನು ತಾತ್ಕಾಲಿಕವಾಗಿ ಕುಗ್ಗಿಸಬಹುದು, ವಿಶೇಷವಾಗಿ ಡಿಹೈಡ್ರೇಶನ್ ಆಗುವವರಲ್ಲಿ ಈ ರೀತಿಯ ಸಮಸ್ಯೆ ಉಂಟುಮಾಡಬಹುದು.
ಅಂಟಿಬಯೋಟಿಕ್ಸ್ :
ಗಂಭೀರ ಬ್ಯಾಕ್ಟೀರಿಯಾ ಸೋಂಕುಗಳಿಗೆ ನೀಡುವ ಈ ಔಷಧಿ ಕಿಡ್ನಿಗಳ ಮೇಲೆ ಹಾನಿಕರವಾಗಿರಬಹುದು, ಹೀಗಾಗಿ ಇದರ ಡೋಸ್ ಮತ್ತು ತೆಗೆದುಕೊಳ್ಳುವ ಅವಧಿಯ ಕುರಿತು ವೈದ್ಯರ ನಿರ್ದೇಶನ ಅಗತ್ಯ.
ಪಿಪಿಐಗಳು (PPI – Proton Pump Inhibitors)
ಆಸಿಡ್ ಇನ್ಫ್ಲಮೇಶನ್ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ನೀಡಲಾಗುವ ಈ ಔಷಧಿಗಳನ್ನು ದೀರ್ಘಕಾಲ ಸೇವಿಸಿದರೆ ಕಿಡ್ನಿಗಳಿಗೆ ದೀರ್ಘಕಾಲಿಕ ಹಾನಿಯಾಗಬಹುದು.
ಇದ್ಯಾವುದು ವೈದ್ಯರಿಂದ ಬಂದ ಮಾಹಿತಿ ಅಲ್ಲ. ಅಂತರ್ಜಾಲ ಆಧರಿಸಿದ ಮಾಹಿತಿಯಾಗಿದ್ದು, ಮೇಲ್ಕಂಡ ಔಷಧಿಗಳನ್ನು ವೈದ್ಯರ ಸಲಹೆಯಿಲ್ಲದೆ ತೆಗೆದುಕೊಳ್ಳುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಯಾವಾಗಲೂ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಗತ್ಯ.