ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇ 12 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಕದನ ವಿರಾಮ ಒಪ್ಪಂದ ಮುಂದುವರೆಯಲಿದೆ ಎಂದು ಸೇನಾ ಹಿರಿಯ ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
ಕದನ ವಿರಾಮ ತಾತ್ಕಾಲಿಕವಾಗಿದ್ದು, ಕೊನೆಗೊಳ್ಳುವ ನಿರೀಕ್ಷೆಯಿದೆ ಎಂಬ ಊಹಾಪೋಹಗಳು ಕುರಿತು ಪ್ರತಿಕ್ರಿಯೆ ನೀಡಿರುವ ಸೇನಾಧಿಕಾರಿ, ಡಿಜಿಎಂಒಗಳ ಮಾತುಕತೆ ಸಮಯದಲ್ಲಿ ಒಪ್ಪಿಕೊಂಡ ಯುದ್ಧ ಕುರಿತ ನಿಲುವಿಗೆ ಯಾವುದೇ ಮುಕ್ತಾಯ ದಿನಾಂಕವಿಲ್ಲ ಎಂದು ಹೇಳಿದರು.
ಭಾನುವಾರ ಉಭಯ ದೇಶಗಳ ಡಿಜಿಎಂಒಗಳ ನಡುವೆ ಯಾವುದೇ ಹೊಸ ಮಾತುಕತೆ ನಿಗದಿಯಾಗಿಲ್ಲ ಎಂದೂ ಇದೇ ವೇಳೆ ಸ್ಪಷ್ಟಪಡಿಸಿದರು.
ಮೇ 12 ರಂದು ಹೇಳಿಕೆ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಭಾರತ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ತಾಣಗಳ ಮೇಲಿನ ಕಾರ್ಯಾಚರಣೆಯನ್ನು ಸದ್ಯಕ್ಕಷ್ಟೇ ನಿಲ್ಲಿಸಿದ್ದು, ನೆರೆಯ ರಾಷ್ಟ್ರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದ್ದರು.
ಪಾಕಿಸ್ತಾನದ ಭಯೋತ್ಪಾದಕ ಮತ್ತು ಮಿಲಿಟರಿ ತಾಣಗಳ ಮೇಲಿನ ನಮ್ಮ ದಾಳಿಯನ್ನು ಸದ್ಯಕ್ಕಷ್ಟೇ ನಿಲ್ಲಿಸಿದ್ದೇವೆ. ನೆರೆಯ ರಾಷ್ಟ್ರದ ಯಾವುದೇ ಪರಮಾಣು ಬೆದರಿಕೆಗಳು ಅಥವಾ ಬ್ಲ್ಯಾಕ್ಮೇಲಿಂಗ್ ಅನ್ನು ಸಹಿಸಲಾಗುವುದಿಲ್ಲ, ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ಸಹಿಸುವುದಿಲ್ಲ. ಇದಕ್ಕೆ ಸೂಕ್ತ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.