ಅಪಾರ್ಟ್‌ಮೆಂಟ್‌ ಕಾರಿಡಾರ್‌ನಲ್ಲಿ ಶೂ ರ‍್ಯಾಕ್ ಇಟ್ಟಿದ್ದಕ್ಕೆ ನಿವಾಸಿಯೊಬ್ಬರಿಗೆ 24 ಸಾವಿರ ರೂ. ದಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ನಗರದ ಅಪಾರ್ಟ್‌ಮೆಂಟ್‌ವೊಂದರ ಕಾರಿಡಾರ್‌ನಲ್ಲಿ ಸುಮಾರು ಎಂಟು ತಿಂಗಳ ಕಾಲ ಶೂ ರ‍್ಯಾಕ್ ಇಟ್ಟಿದ್ದ ವ್ಯಕ್ತಿಗೆ ಅಲ್ಲಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು 24 ಸಾವಿರ ರೂ. ದಂಡ ವಿಧಿಸಿದೆ.

ಎಲೆಕ್ಟ್ರಾನಿಕ್‌ ಸಿಟಿಯ ಒಂದನೇ ಹಂತದ ಪ್ರೆಸ್ಟೀಜ್‌ ಸನ್‌ರೈಸ್‌ ಪಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿಈ ಘಟನೆ ನಡೆದಿದೆ. ಅಲ್ಲದೆ, ಯಾವುದೇ ನಿವಾಸಿಯು ತಮ್ಮ ಜಾಗ ಹೊರತುಪಡಿಸಿ ಅಪಾರ್ಟ್‌ಮೆಂಟ್‌ನ ಕಾಮನ್‌ ಏರಿಯಾದ ಕಾರಿಡಾರ್‌ಗಳಲ್ಲಿ ಶೂ ರ‍್ಯಾಕ್ ಸೇರಿದಂತೆ ಯಾವುದೇ ವಸ್ತುಗಳನ್ನು ಇಟ್ಟರೆ, ಅಂಥವರಿಗೆ ದಿನಕ್ಕೆ 100 ರೂ. ದಂಡ ವಿಧಿಸುವ ಪರಿಪಾಠವನ್ನು ಅನುಸರಿಸಲಾಗುತ್ತಿದೆ. ಇದೀಗ ಆ ದಂಡದ ಮೊತ್ತವನ್ನು 200 ರೂ.ಗಳಿಗೆ ಹೆಚ್ಚಳ ಮಾಡುವ ಬಗ್ಗೆಯೂ ಸಂಘವು ಚಿಂತನೆ ನಡೆಸಿದೆ.

ಈ ವಸತಿ ಸಂಕೀರ್ಣದಲ್ಲಿ1046 ಫ್ಲ್ಯಾಟ್‌ಗಳಿದ್ದು, ಶೇ 50ಕ್ಕೂ ಅಧಿಕ ನಿವಾಸಿಗಳು ತಮ್ಮ ಮನೆಯ ಶೂ ರ್ಯಾಕ್‌, ಪಾಟ್‌ಗಳು ಹಾಗೂ ಇನ್ನಿತರ ಬೇಡವಾದ ವಸ್ತುಗಳನ್ನು ಕಾಮನ್‌ ಏರಿಯಾಗಳಲ್ಲಿ ಇಡುತ್ತಿರುವುದು ಕಂಡುಬಂದಿತ್ತು.

ಅಗ್ನಿಶಾಮಕ ನಿಯಮಗಳ ಪ್ರಕಾರ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ತುರ್ತು ಸಂದರ್ಭಗಳಲ್ಲಿ ಕಾರ್ಯಾಚರಣೆಗಳನ್ನು ನಡೆಸಲು ಕಾರಿಡಾರ್‌ಗಳು ಮುಕ್ತವಾಗಿರಬೇಕು. ಯಾವುದೇ ಅಡೆತಡೆ ಇರಬಾರದೆಂಬ ನಿಯಮವಿದೆ. ಆದರೆ ಅದನ್ನು ನಿವಾಸಿಗಳು ಪಾಲನೆ ಮಾಡುತ್ತಿರಲಿಲ್ಲ. ಹಾಗಾಗಿ ನಿಯಮಾವಳಿಗೆ ವಿರುದ್ಧವಾಗಿದ್ದ ಶೂ ರ‍್ಯಾಕ್, ಪಾಟ್‌ಗಳು ಸೇರಿದಂತೆ ಎಲ್ಲಾ ವಸ್ತುಗಳನ್ನು ತೆಗೆಯುವಂತೆ ಸಂಘವು ಎಲ್ಲ ನಿವಾಸಿಗಳನ್ನು ಹಲವು ಬಾರಿ ಸಂಪರ್ಕ ಮಾಡಿ ಮನವಿ ಮಾಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!