ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಲಾಪುರ ಬಳಿ ಟೆಕ್ಸ್‌ಟೈಲ್ ಫ್ಯಾಕ್ಟರಿಯಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಮೂವರು ಮಹಿಳೆಯರು, ಮಗು ಸೇರಿ ಎಂಟು ಮಂದಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ಸಂಭವಿಸಿದೆ.
ಮೃತರಲ್ಲಿ ಕಾರ್ಖಾನೆಯ ಮಾಲೀಕ ಹಾಜಿ ಉಸ್ಮಾನ್ ಹಸನ್‌ಭಾಯ್ ಮನ್ಸೂರಿ(80) ಮೊಮ್ಮಗ ಅನಸ್ ಹನೀಫ್ ಮಸೂರಿ(25), ಪತ್ನಿ ಶಿಫಾ ಅನಸ್ ಮನ್ಸೂರಿ(20), ಯೂಸುಫ್ ಮನ್ಸೂರಿ(3), ನಾಲ್ವರು ಕಾರ್ಮಿಕರು ಸೇರಿ ಎಂಟು ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿದೆ.
ಮುಂಬೈನಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಸೋಲಾಪುರ ಎಂಐಡಿಸಿಯ ಅಕ್ಕಲ್‌ಕೋಟ್ ರಸ್ತೆಯಲ್ಲಿರುವ ಟೆಕ್ಸ್ಟೈಲ್ ಕಾರ್ಖಾನೆಯಲ್ಲಿ ಶಾರ್ಟ್ ಸಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಪೊಲೀಸರು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿ ನಂದಿಸಲು ಹರಸಾಹಸಪಟ್ಟರು.
ಪಿಎಂ ಸಂತಾಪ, ಪರಿಹಾರ ಘೋಷಣೆ
ಸೋಲಾಪುರ ಅಗ್ನಿ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ಪಿಎಂ ಪರಿಹಾರ ನಿಧಿಯಿಂದ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ. ಇನ್ನು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಸಂತಾಪ ಸೂಚಿಸಿ, ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.