ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆದ ಸಂದರ್ಭದಲ್ಲಿ ಜಾರಿಯಲ್ಲಿದ್ದ ನಿರ್ಬಂಧವನ್ನು ಉಲ್ಲಂಘಿಸಿ ಮತ್ತು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ತುಂಗಭದ್ರಾ ಅಣೆಕಟ್ಟಿನ ಕಾರ್ಯನಿರ್ವಾಹಕ ಎಂಜಿನಿಯರ್ ಒಬ್ಬರು ಮೇ 10 ರಂದು ಜಲಾಶಯದ ಆವರಣದಲ್ಲಿ ತಮ್ಮ ಮಗನ ನಿಶ್ಚಿತಾರ್ಥ ಸಮಾರಂಭವನ್ನು ಆಯೋಜಿಸಿದ್ದರು.
ಮೇ 8 ರಿಂದ ಅಣೆಕಟ್ಟುಗಳು ಮತ್ತು ದೇವಾಲಯಗಳು ಸೇರಿದಂತೆ ಅನೇಕ ಪ್ರವಾಸಿ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಆದರೆ, ಈ ನಿರ್ಬಂಧವನ್ನು ಉಲ್ಲಂಘಿಸಿ ಕಾರ್ಯನಿರ್ವಾಹಕ ಎಂಜಿನಿಯರ್ ಗಿರೀಶ್ ಮೇಟಿ ಅವರು ತಮ್ಮ ಮಗನ ನಿಶ್ಚಿತಾರ್ಥ ಸಮಾರಂಭ ಆಯೋಜಿಸಿದ್ದರು. ಈ ನಿಶ್ಚಿತಾರ್ಥ ಸಮಾರಂಭದಲ್ಲಿ ನೂರಾರು ಜನ ಅತಿಥಿಗಳು ಭಾಗವಹಿಸಿದ್ದರು ಎನ್ನಲಾಗಿದೆ.
ಇನ್ನು, ಅಣೆಕಟ್ಟಿನ ಹಿಂಭಾಗಕ್ಕೆ ಜನರು ಹೋಗುವುದನ್ನು ತಡೆಯಲು ಚೆಕ್‌ಪೋಸ್ಟ್ ನಿರ್ಮಿಸಲಾಗಿತ್ತು. ಆದರೂ ಕೂಡ ನೂರಾರು ಜನರು ಈ ಚೆಕ್‌ಪೋಸ್ಟ್ ಮೂಲಕವೇ ಹಾದುಹೋದರು ಎಂದು ತಿಳಿದುಬಂದಿದೆ. ನಿಯಮಗಳನ್ನು ಉಲ್ಲಂಘಿಸಿರುವುದರಿಂದ, ಗಿರೀಶ್ ಮೇಟಿ ಅವರ ವಿರುದ್ಧ ಶಿಕ್ಷಾರ್ಹ ಕ್ರಮ ಕೈಗೊಳ್ಳಬೇಕೆಂದು ಹಲವರು ಒತ್ತಾಯಿಸುತ್ತಿದ್ದಾರೆ.