ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆಯಿಂದ ಉದ್ಯಾನ ನಗರಿಯ ಸಮಸ್ಯೆಗಳಿಂದ ಜನರು ರೋಸಿ ಹೋಗಿದ್ದಾರೆ. ಇದರ ಬೆನ್ನಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬರೋಬ್ಬರಿ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಮಹಿಳೆಯೊಬ್ಬರು ನೋಟಿಸ್ ಕಳುಹಿಸಿದ್ದಾರೆ.
ಬೆಂಗಳೂರಿನ ರಿಚ್ಮಂಡ್ ನಿವಾಸಿ ಆಗಿರುವ ಡಾ. ದಿವ್ಯಾ ಕಿರಣ್ ಎಸ್ ಎನ್ನುವರು ಕೇವಲ 15 ದಿನಗಳಲ್ಲಿ 50 ಲಕ್ಷ ರೂಪಾಯಿ ಪರಿಹಾರದ ಜೊತೆಗೆ ನೋಟಿಸ್ ಶುಲ್ಕ 10 ಸಾವಿರ ರೂಪಾಯಿಗಳನ್ನು ನೀಡಬೇಕು ಎಂದು ಬಿಬಿಎಂಪಿಗೆ ಲೀಗಲ್ ನೋಟಿಸ್ ಅನ್ನು ನೀಡಿದ್ದಾರೆ. ಬೆಂಗಳೂರಿನ ರಸ್ತೆಗಳಲ್ಲಿ ಸಾಕಷ್ಟು ಗುಂಡಿಗಳಿದ್ದು ಇದರಿಂದ ಓಡಾಡುವಾಗ ನೋವು ಅನುಭವಿಸುತ್ತಿದ್ದೇವೆ ಎಂದು ನೋಟಿಸ್ನಲ್ಲಿ ಉಲ್ಲೇಖ ಮಾಡಲಾಗಿದೆ.
ಬಿಬಿಎಂಪಿಗೆ ತೆರಿಗೆ ಪಾವತಿದಾರಳು ಆಗಿದ್ದರೂ ನಗರದಲ್ಲಿ ಉತ್ತಮ ಮೂಲಭೂತ ಸೌಕರ್ಯ ಸಿಗುತ್ತಿಲ್ಲ ಎಂದು ಆರೋಪಿಸಲಾಗಿದೆ. ಆಟೋ, ಬೈಕ್ ಮೂಲಕ ಕಳಪೆ ರಸ್ತೆಗಳಲ್ಲಿ ಹೋಗೋಕೆ ಆಗುತ್ತಿಲ್ಲ. ಬಿಬಿಎಂಪಿಯ ತೀವ್ರ ನಿರ್ಲಕ್ಷ್ಯದಿಂದ ಸಾರ್ವಜನಿಕ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಟೀಕೆ ಮಾಡಿದ್ದಾರೆ. ನಗರದ ಕಳಪೆ ರಸ್ತೆಗಳಲ್ಲಿ ಸಂಚರಿಸಿ ದೈಹಿಕ, ಮಾನಸಿಕ ಯಾತನೆ ಅನುಭವಿಸುತ್ತಿರುವುದಕ್ಕೆ ಪಾಲಿಕೆ ಕಾರಣವಾಗಿದೆ ಎಂದು ದೂರಲಾಗಿದೆ.