ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ ಕಂಠೀರವ ಕ್ರೀಡಾಂಗಣ ಜಲಾವೃತಗೊಂಡಿದ್ದು, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಗಳಿಗೆ ನೀರು ನುಗ್ಗಿ ಕ್ರೀಡಾ ಸಾಮಗ್ರಿಗಳಿಗೆ ಹಾನಿಯಾಗಿದೆ.
ಇದರಿಂದ ಕ್ರೀಡಾಪಟುಗಳ ಅಭ್ಯಾಸಕ್ಕೆ ಅಡಚಣೆಯಾಗಿದ್ದು, ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ರೀಡಾಂಗಣದ ಹೊರಭಾಗ, ಹೊರಾಂಗಣದಲ್ಲಿರುವ ಫುಟ್ಬಾಲ್ ಮೈದಾನ, ಅಥ್ಲೆಟಿಕ್ಸ್ ಟ್ರ್ಯಾಕ್, ಜಿಮ್ನಾಸ್ಟಿಕ್ ಕೋರ್ಟ್ ಸೇರಿದಂತೆ ಬಹುತೇಕ ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತಿತ್ತು.
ಕ್ರೀಡಾಂಗಣದ ಹಲವು ಗೇಟ್ಗಳ ಭಾಗದಲ್ಲೂ ನೀರು ತುಂಬಿತ್ತು. ಇದರಿಂದ ಕ್ರೀಡಾಪಟುಗಳು ಕ್ರೀಡಾಂಗಣ ಪ್ರವೇಶಿಸಲೂ ಪರದಾಡಿದರು. ಮಳೆ ನೀರಿನ ನಡುವೆಯೇ ಕೆಲ ಅಥ್ಲೀಟ್ಗಳು ಅಭ್ಯಾಸ ನಡೆಸಿದರು.ಕ್ರೀಡಾಂಗಣವನ್ನು ಕೋಟ್ಯಂತರ ರು. ಖರ್ಚು ಮಾಡಿ ನಿರ್ಮಿಸಲಾಗಿದೆ. ಆದರೆ ಮಳೆ ಬಂದರೆ ಪ್ರತಿ ಬಾರಿಯೂ ಕ್ರೀಡಾಂಗಣಕ್ಕೆ ನೀರು ನುಗ್ಗಿ ತೊಂದರೆಯಾಗುತ್ತದೆ.
ಈ ಬಾರಿ ಕ್ರೀಡಾಂಗಣ ಕೆರೆಯಂತಾಗಿದ್ದು, ಕ್ರೀಡಾಪಟುಗಳು, ಕೋಚ್ಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದರು. ಕ್ರೀಡಾಂಗಣದ ಬಹುತೇಕ ಎಲ್ಲಾ ಕಡೆಗಳಲ್ಲೂ ನೀರು ತುಂಬಿದ್ದರಿಂದ ಅಥ್ಲೀಟ್ಗಳ ಸಾಮಾಗ್ರಿಗಳಿಗೂ ಹಾನಿಯುಂಟಾಗಿದೆ.