ನೀರಿನ ಬಾಟಲಿಗೆ ಒಂದು ರೂಪಾಯಿ ಜಿಎಸ್‌ಟಿ ಹಾಕಿದ ರೆಸ್ಟೋರೆಂಟ್‌ಗೆ 8 ಸಾವಿರ ದಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕುಡಿಯುವ ನೀರಿನ ಬಾಟಲಿಗೆ 1 ರೂ. ಜಿಎಸ್‌ಟಿ ವಿಧಿಸಿದ್ದಕ್ಕೆ ಮಧ್ಯಪ್ರದೇಶದ ಗ್ರಾಹಕ ನ್ಯಾಯಾಲಯ ರೆಸ್ಟೋರೆಂಟ್‌ ಒಂದಕ್ಕೆ 8 ಸಾವಿರ ರೂ. ದಂಡ ವಿಧಿಸಿದೆ.

ದೂರುದಾರರಾದ ಐಶ್ವರ್ಯಾ ಅವರು 2021ರಲ್ಲಿ ಸ್ನೇಹಿತರೊಂದಿಗೆ ರೆಸ್ಟೋರೆಂಟ್‌ಗೆ ಊಟಕ್ಕೆ ಎಂದು ತೆರಳಿದ್ದರು. ಊಟದ ವೇಳೆ ಕುಡಿಯುವ ನೀರಿನ ಬಾಟಲ್‌ ಆರ್ಡರ್‌ ಮಾಡಿದ್ದರು

ಊಟದ ಬಳಿಕ ರೆಸ್ಟೋರೆಂಟ್‌ ನೀರಿನ ಬಾಟಲ್ ಮೇಲೂ ಜಿಎಸ್‌ಟಿ ಹಾಕಿತ್ತು. ನೀರಿನ ಬಾಟಲಿಗೆ ಎಂಆರ್‌ಪಿ ದರ 20 ರೂ.ನಿಗದಿಯಾಗಿದ್ದರೆ ರೆಸ್ಟೋರೆಂಟ್‌ 1 ರೂ. ಜಿಎಸ್‌ಟಿ ಸೇರಿಸಿ 29 ರೂ. ದರ ವಿಧಿಸಿತ್ತು. ಹೆಚ್ಚುವರಿಯಾಗಿ 9 ರೂ. ಯಾಕೆ ಪಾವತಿಸಬೇಕು ಎಂದು ದೂರುದಾರರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ರೆಸ್ಟೋರೆಂಟ್‌ ಸಿಬ್ಬಂದಿ ಯಾವುದೇ ಸರಿಯಾದ ಕಾರಣ ನೀಡದೇ ಬಿಲ್ಲಿಂಗ್ ಕಾನೂನುಬದ್ಧವಾಗಿದೆ ಎಂದು ಹೇಳಿ ಮರುಪಾವತಿ ಮಾಡಲು ನಿರಾಕರಿಸಿದ್ದಾರೆ.

ನೀರಿನ ಬಾಟಲಿಗೆ ಎಂಆರ್‌ಪಿಗಿಂತಲೂ ಹೆಚ್ಚಿನ ದರವನ್ನು ವಿಧಿಸಿದ ರೆಸ್ಟೋರೆಂಟ್‌ ನಿರ್ಧಾರವನ್ನು ಐಶ್ವರ್ಯಾ ಅವರು ಗ್ರಾಹಕ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ವಿಚಾರಣೆ ವೇಳೆ ರೆಸ್ಟೋರೆಂಟ್‌ ಪರ ವಕೀಲರು, ಆಸನ, ಎಸಿ ಮತ್ತು ಟೇಬಲ್‌ ಮೇಲಿನ ಸೇವೆಯಂತಹ ಹೆಚ್ಚುವರಿ ಸೇವೆಗಳನ್ನು ನೀಡಿದ್ದಕ್ಕೆ ಎಂಆರ್‌ಪಿಗಿಂತ ಹೆಚ್ಚಿನ ಶುಲ್ಕ ವಿಧಿಸುವುದು ಸಮರ್ಥನೀಯ ಎಂದು ವಾದಿಸಿದ್ದರು.

ಕೋರ್ಟ್‌ ರೆಸ್ಟೋರೆಂಟ್‌ ವಾದವನ್ನು ತಿರಸ್ಕರಿಸಿತು. ಬಾಟಲಿ ನೀರಿಗೆ ಜಿಎಸ್‌ಟಿಯನ್ನು ಈಗಾಗಲೇ ಎಂಆರ್‌ಪಿಯಲ್ಲಿ ಸೇರಿಸಲಾಗಿದೆ ಎಂದು ತೀರ್ಪು ನೀಡಿತು. ಜಿಎಸ್‌ಟಿಯಾಗಿ ವಿಧಿಸಲಾದ 1 ರೂ.ಗಳನ್ನು ಮರುಪಾವತಿಸುವಂತೆ ರೆಸ್ಟೋರೆಂಟ್‌ಗೆ ಆದೇಶಿಸಿತು. ಮಾನಸಿಕ ಯಾತನೆ ಮತ್ತು ಸೇವೆಯ ಕೊರತೆಗಾಗಿ 5,000 ರೂ., ಕಾನೂನು ವೆಚ್ಚಗಳಿಗಾಗಿ 3,000 ರೂ. ಸೇರಿದಂತೆ ಒಟ್ಟು 8,000 ರೂ.ಗಳನ್ನು ಗ್ರಾಹಕರಿಗೆ ಪಾವತಿಸುವಂತೆ ಕೋರ್ಟ್‌ ರೆಸ್ಟೋರೆಂಟ್‌ಗೆ ಸೂಚಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!