ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಗೆ ’ಸಾಮರಸ್ಯ ಪ್ರಶಸ್ತಿ’

ಹೊಸ ದಿಗಂತ ವರದಿ, ಚಿತ್ರದುರ್ಗ

ಉಡುಪಿಯ ಅಮೋಘ ಸಾಂಸ್ಕೃತಿಕ-ಸಾಮಾಜಿಕ-ಸಾಹಿತ್ಯಿಕ ಸಂಸ್ಥೆ ಕೊಡ ಮಾಡುವ ಪ್ರತಿಷ್ಟಿತ ಸಾಮರಸ್ಯ ಪ್ರಶಸ್ತಿ ಈ ಬಾರಿ ಚಿತ್ರದುರ್ಗದ ಡಾ. ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರಿಗೆ ಒಲಿದು ಬಂದಿದೆ.

ದಿನಾಂಕ ೨೪.೦೫.೨೦೨೫ ರಂದು ಶನಿವಾರ ಸಂಜೆ ೪ ಗಂಟೆಗೆ ಉಡುಪಿಯ ಎಂ.ಜಿ.ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನೆರವೇರಲಿದೆ.

ಸಮಾರಂಭದಲ್ಲಿ ಖ್ಯಾತ ಸಂಶೋಧಕರಾದ ಡಾ.ಪಾದೇಕಲ್ಲು ವಿಷ್ಣು ಭಟ್, ಮಣಿಪಾಲ ಮಾಹೆ ಉಪ ಕುಲಾಧಿಪತಿಗಳಾದ ಡಾ. ಹೆಚ್. ಎಸ್. ಬಲ್ಲಾಳ್, ಸಾಮಾಜಿಕ ಕಾರ್ಯಕರ್ತ ವಾದಿರಾಜ್, ಉಡುಪಿ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಎಂಜಿಎಂ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಲಕ್ಷ್ಮಿ ನಾರಾಯಣ ಕಾರಂತ, ಲೇಖಕಿ ಪಾರ್ವತಿ ಬಿ.ಐತಾಳ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು.

ಚಿತ್ರದುರ್ಗದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠವು ಹೆಸರಿನಿಂದ ಜಾತಿ ಸೂಚಕವಾಗಿದ್ದರೂ ಪೀಠಧ್ಯಕ್ಷರಾದ ಡಾ. ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು ಸಮಾಜದ ಎಲ್ಲಾ ಜಾತಿ ವರ್ಗಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಮಾಜದಲ್ಲಿ ನೆಲೆಯೂ ರಿರುವ ಮೇಲು-ಕೀಳು ಭಾವನೆಗಳು ಮೂಢನಂಬಿಕೆ ಕಂದಾಚಾರ ಜಾತೀಯತೆ ನಿರ್ಮೂಲನೆಗೆ ಸದಾ ಶ್ರಮಿಸುತ್ತಿದ್ದಾರೆ.

ಮಾನವ ಸಂಘ ಜೀವಿ ಸಮಾಜದಲ್ಲಿ ಸಹಬಾಳ್ವೆ ನಡೆಸುವಾಗ ಎಲ್ಲಾ ಜಾತಿ ವರ್ಗಗಳ ಜನರು ಪರಸ್ಪರ ಹೊಂದಿಕೊಂಡು ಬಾಳಿದಾಗ ಮಾತ್ರ ಮಾನವನ ಅಭ್ಯುದಯ ಸಾಧ್ಯ ಎಂದು ಬಲವಾಗಿ ಪ್ರತಿಪಾದಿಸಿಕೊಂಡು ಬರುತ್ತಿದ್ದಾರೆ. ಶ್ರೀಗಳ ಈ ಸಾಮಾಜಿಕ ಸಾಮರಸ್ಯದ ನಿರಂತರ ಬದ್ಧತೆಯನ್ನು ಗುರುತಿಸಿ ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ಅಮೋಘ ಸಂಸ್ಥೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!