ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯನ್ನು ಸಣ್ಣ ಯುದ್ಧ ಎಂದು ಕರೆದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿ ಕಾರಿದ್ದು, ನಮ್ಮ ಸಶಸ್ತ್ರ ಪಡೆಗಳ ಅಪ್ರತಿಮ ಧೈರ್ಯಕ್ಕೆ ಅಪಮಾನ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಸರ್ಕಾರದ ಎರಡನೇ ವರ್ಷದ ಸಾಧನಾ ಸಮಾವೇಶದಲ್ಲಿ ‘ಹೆಚ್ಚು ಕಡಿಮೆ ಪುಟ್ಟ ಯುದ್ಧಗಳು ನಡೆದಿವೆ. ಅಥವಾ ಪಾಕಿಸ್ತಾನದ ವಿರುದ್ಧ ನಾವು ಘರ್ಷಣೆ ಮಾಡುತ್ತಿದ್ದೇವೆ. ಪಾಕಿಸ್ತಾನದ ಕೆಲಸ ಯಾವಾಗಲೂ ಭಾರತದ ಮೇಲೆ ಗೂಬೆ ಕೂಡಿಸುವುದು’ ಎಂದು ಮಲ್ಲಿಕಾರ್ಜುನ್ ಖರ್ಗೆಯವರು ಹೇಳಿರುವ ವಿಡಿಯೋವನ್ನು ಬಿವೈ ವಿಜಯೇಂದ್ರ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ, ವಾಗ್ದಾಳಿ ಮಾಡಿದ್ದಾರೆ.
ನಿಮ್ಮ ಪಕ್ಷದ ಟ್ರ್ಯಾಕ್ ರೆಕಾರ್ಡ್ ಇದಕ್ಕೆ ತದ್ವಿರುದ್ಧವಾಗಿದೆ. ನಿಮ್ಮ ಸರ್ಕಾರದ ಅವಧಿಯಲ್ಲಿ 7/11 ಮುಂಬೈ ರೈಲು ಸ್ಫೋಟ ಸೇರಿದಂತೆ ಲೆಕ್ಕವಿಲ್ಲದಷ್ಟು ದಾಳಿಗಳು ದೇಶದಲ್ಲಿ ನಡೆದಿವೆ. ಸಾಕಷ್ಟು ದಾಳಿಗಳು ನಡೆದ ನಂತರವೂ, ನಿಮ್ಮ ಯುಪಿಎ ಸರ್ಕಾರ ಶಾಂತವಾಗಿಯೇ ಇತ್ತು ಹೊರತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದೇಶವು ನೆನಪಿಸಿಕೊಳ್ಳುತ್ತದೆ ಎಂದು ಹೇಳಿದರು.
ನಮ್ಮ ಶಸ್ತ್ರ ಪಡೆಗಳ ಯಾವುದೇ ಕ್ರಮವು ಎಂದಿಗೂ ಚುಟ್ಟಪುಟ್ಟ ಅಲ್ಲ. ಪ್ರತಿಯೊಂದು ಕಾರ್ಯಾಚರಣೆಯು ರಾಷ್ಟ್ರೀಯ ಗೌರವ ಮತ್ತು ನಮ್ಮ ಹುತಾತ್ಮರ ರಕ್ತದ ಭಾರವನ್ನು ಹೊತ್ತಿದೆ. ನಮ್ಮ ಸೈನಿಕರ ತ್ಯಾಗವನ್ನು ಕಡಿಮೆ ಮಾಡಬೇಡಿ ಎಂದು ವಾಗ್ದಾಳಿ ಮಾಡಿದರು.