ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡ್ಯ ಜಿಲ್ಲೆ ಕೃಷ್ಣರಾಜಸಾಗರ ಜಲಾಶಯದ ಬೃಂದಾವನ ಉದ್ಯಾನ ಆವರಣದಲ್ಲಿ ಸುಮಾರು ಎರಡು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್/ಡಿಸ್ನಿ ಲ್ಯಾಂಡ್ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಿ ಅಧಿಸೂಚನೆ ಹೊರಡಿಸಿರುವ ವಿಚಾರ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ರಾಜ್ಯ ಸರ್ಕಾರವು ಮಾರ್ಚ್ 15ರಂದು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಕೆ.ಬೋರಯ್ಯ ಎಂಬುವರು ಸೇರಿದಂತೆ ಮಂಡ್ಯ ಜಿಲ್ಲೆಯ ಇತರ ನಿವಾಸಿಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರ ನೇತೃತ್ವದ ವಿಭಾಗೀಯ ಪೀಠ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಅಲ್ಲದೆ, ಖಾಸಗಿ ಸರ್ಕಾರಿ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ ಅಮ್ಯೂಸ್‌ಮೆಂಟ್ ಪಾರ್ಕ್/ಡಿಸ್ನಿ ಲ್ಯಾಂಡ್ ಯೋಜನೆಗೆ ಸಂಬಂಧಿಸಿದ ಸಮಗ್ರ ವಿವರಗಳನ್ನು ಸಲ್ಲಿಸುವಂತೆ ಸರ್ಕಾರಕ್ಕೆ ಇದೇ ವೇಳೆ ಸೂಚನೆ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ. ಶಿವಪ್ರಕಾಶ್ ವಾದ ಮಂಡಿಸಿ, ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್.ಪೇಟೆ, ಮಳವಳ್ಳಿ, ಚನ್ನಪಟ್ಟಣ, ರಾಮನಗರ ತಾಲೂಕಿನ ಲಕ್ಷಾಂತರ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷೆಯಿಂದ ಕೆಆರ್‌ಎಸ್ ಜಲಾಶಯ ನಿರ್ಮಾಣ ಮಾಡಿದ್ದಾರೆ. 198 ಎಕರೆಯಲ್ಲಿ ಬೃಂದಾವನ ಉದ್ಯಾನ ನಿರ್ಮಾಣ ಮಾಡಲಾಗಿದೆ. ಇದೀಗ ಬೃಂದಾವನ ಉದ್ಯಾನ ಅಭಿವೃದ್ಧಿ ಹೆಸರಿನಲ್ಲಿ 2,663 ಕೋಟಿ ರೂ. ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್/ಡಿಸ್ನಿ ಲ್ಯಾಂಡ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಉದ್ದೇಶಿಸಿದೆ ಎಂದು ತಿಳಿಸಿದರು.
ಅಲ್ಲದೆ, ನೀರಾವರಿ ಹಾಗೂ ತೋಟಗಾರಿಕೆ ಉದ್ದೇಶದಿಂದ ಮೈಸೂರು ರಾಜಮನೆತನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಬೃಂದಾವನ ಉದ್ಯಾನವನ್ನು ಅಭಿವೃದ್ಧಿಪಡಿಸಿದ್ದರು. ಆದರೆ, ಕೇವಲ ಮನರಂಜನೆ ಮತ್ತೂ ಪ್ರವಾಸಿಗರ ಆಕರ್ಷಣೆಗಾಗಿ ಈ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ. ಈ ಯೋಜನೆ ಜಾರಿಯಾದರೆ ಕೆಆರ್‌ಎಸ್ ಮತ್ತು ಅದನ್ನು ಅವಲಂಬಿರುವ ಲಕ್ಷಾಂತರ ಕೃಷಿ ಜಮೀನು ಮೇಲೆ ದುಷ್ಪರಿಣಾಮ ಉಂಟಾಗಲಿದೆ. ರೈತ ಸಮುದಾಯದ ಜೀವನಾಧಾರಕ್ಕೆ ಧಕ್ಕೆಯಾಗಲಿದೆ ಎಂದಿದ್ದಾರೆ.