ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ ನಗರದ ಹೊರವಲಯದಲ್ಲಿರುವ ರೆಸಾರ್ಟ್‌ನಲ್ಲಿ ಪೊಲೀಸ್ ಅಧಿಕಾರಿಯ ಮಗ ಮತ್ತು ಇತರ ಇಬ್ಬರು ಸೇರಿದಂತೆ ಮೂವರು 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿರುವ ಘಟನೆ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಬೆಳಗಾವಿ ಪೊಲೀಸರು ಆರೋಪಿಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. ಇಬ್ಬರ ಪೈಕಿ ಓರ್ವ ಅಪ್ರಾಪ್ತನಾಗಿದ್ದು, ಪೊಲೀಸ್ ಅಧಿಕಾರಿಯ ಮಗ ಕೂಡ ಭಾಗಿಯಾಗಿದ್ದಾನೆಂಬ ಆರೋಪ ಕೇಳಿ ಬಂದಿದೆ.
ಪ್ರಕರಣ ಸಂಬಂಧ ಇಬ್ಬರನ್ನು ಬಂಧನಕ್ಕೊಳಪಡಿಸಲಾಗಿದ್ದು, ಇಂದು ರಾತ್ರಿ ಮತ್ತೋರ್ವನನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಬೆಳಗಾವಿ ಪೊಲೀಸ್ ಆಯುಕ್ತ ಇಯಾಡಾ ಮಾರ್ಟಿನ್ ಮಾರ್ಬನಿಯಾಂಗ್ ತಿಳಿಸಿದ್ದಾರೆ.
ಬೆಳಗಾವಿ ನಿವಾಸಿಯಾಗಿರುವ ಬಾಲಕಿ, ಆರೋಪಿಗಳಲ್ಲಿ ಒಬ್ಬನೊಂದಿಗೆ ಬೆಳಗಾವಿ ಹೊರವಲಯದಲ್ಲಿರುವ ತೋಟದ ಮನೆಗೆ ಹೋಗಿದ್ದಳು. ನಂತರ ಇತರ ಇಬ್ಬರು ಆರೋಪಿಗಳು ಆತನೊಂದಿಗೆ ಸೇರಿಕೊಂಡಿದ್ದಾರೆ.
ಆರೋಪಿಗಳಲ್ಲಿ ಒಬ್ಬನಾದ ಸಕೀಬ್ ತೋಟದ ಮನೆಯಲ್ಲಿ ಒಂದು ಕೊಠಡಿ ಕಾಯ್ದಿರಿಸಿದ್ದ. ಅಲ್ಲಿ ಪಾರ್ಟಿ ಮಾಡಿರುವ ಆರೋಪಿಗಳು, ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅತ್ಯಾಚಾರ ಬಳಿಕ ಆರೋಪಿಯೋರ್ವ ಬಾಲಕಿ ಸರವನ್ನು ಕಸಿದುಕೊಂಡಿದ್ದಾನೆ.
ಈ ನಡುವೆ ಬಾಲಕಿಯ ಕುತ್ತಿಗೆಯಲ್ಲಿ ಸರ ಇಲ್ಲದಿರುವುದನ್ನು ಗಮನಿಸಿರುವ ತಾಯಿ, ಪ್ರಶ್ನೆ ಮಾಡಿದ್ದು, ಬಾಲಕಿ ನಡೆದ ವಿಚಾರವನ್ನ ಬಾಯ್ಬಿಟ್ಟಿದ್ದಾಳೆ. ಕೂಡಲೇ ಕುಟುಂಬವು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಟಿಳಕವಾಡಿ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಪೊಲೀಸ್ ಅಧಿಕಾರಿ ಪುತ್ರನ ಬಂಧಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.