ಹೊಸದಿಗಂತ ಬೆಳಗಾವಿ:
ವರ್ಗಾವಣೆಗಾಗಿ ಅಂಗನವಾಡಿ ಸಹಾಯಕಿಯೊಬ್ಬರಿಂದ ಲಂಚ ಪಡೆಯುವಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ.
ಕಚೇರಿ ಸೂಪರಿಡೆಂಟ್ ಅಬ್ದುಲ್ ವಲಿ, ಕಂಪ್ಯೂಟರ್ ಆಪರೇಟರ್ ಸೌಮ್ಯಾ ಎಂಬವರೇ ಬಲೆಗೆ ಬಿದ್ದಿದ್ದು, ಲಂಚ ಪಡೆಯುತ್ತಿರುವ ಸಂದರ್ಭದಲ್ಲಿಯೇ ಲೋಕಾಯುಕ್ತ ಪೊಲೀಸರು ಇಬ್ಬರು ಅಧಿಕಾರಿಗಳ ಚಳಿ ಬಿಡಿಸಿದ್ದಾರೆ.
ಹುಕ್ಕೇರಿ ತಾಲೂಕಿನ ಅಂಗನವಾಡಿ ಸಹಾಯಕಿ ಶಕುಂತಲಾ ಕಾಂಬಳೆ ಅವರ ವರ್ಗಾವಣೆಗೆ 30 ಸಾವಿರ ರೂ.ಗಳ ಬೇಡಿಕೆಯಿಟ್ಟಿದ್ದರು. ಹೀಗಾಗಿ, ಅವರು ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಬೇಡಿಕೆಯಿಟ್ಟ ಮೂವತ್ತು ಸಾವಿರ ರೂ.ಗಳಲ್ಲಿ 15 ಸಾವಿರ ರೂ.ಗಳನ್ನು ಗುರುವಾರ ಸ್ವೀಕರಿಸುವಾಗ ಲೋಕಾಯುಕ್ತ ಇನ್ಸ್ಪೆಕ್ಟರ್ ಧರ್ಮಟ್ಟಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಲೋಕಾಯುಕ್ತ ದಾಳಿ ಮಾಡುತ್ತಿದ್ದಂತೆ ಕಂಪ್ಯೂಟರ್ ಆಪರೇಟರ್ ಸೌಮ್ಯಾ ಅಸ್ವಸ್ಥತವಾಗಿದ್ದರು. ತಕ್ಷಣವೇ ಕಚೇರಿಗೆ ವೈದ್ಯರನ್ನು ಕರೆಸಿ ಅವರಿಗೆ ಚಿಕಿತ್ಸೆ ಕೊಡಿಸಿರುವ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ.