ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಚಿವ ಡಾ. ಜಿ. ಪರಮೇಶ್ವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಇ.ಡಿ. ದಾಳಿ ರಾಜಕೀಯ ಪ್ರೇರಿತ ಕ್ರಮ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಈ ನಡುವೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವು ನಾಯಕರು ಡಾ.ಜಿ.ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿ ಗೃಹಸಚಿವರಿಗೆ ಬೆಂಬಲ ಸೂಚಿಸಿದ್ದಾರೆ.
ಇನ್ನು ರನ್ಯಾ ರಾವ್ ಪ್ರಕರಣ ಹಾಗೂ ಇಡಿ ದಾಳಿಗೂ ಲಿಂಕ್ ಇರಬಹುದು ಎಂಬ ಮಾತುಗಳು ಕೇಳಿಬರುತ್ತಿರುವ ಸಮಯದಲ್ಲಿ ಮಾಧ್ಯಮಗಳ ಮುಂದೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ನಾನು ಪರಮೇಶ್ವರ ಅವರ ಹತ್ತಿರ ಮಾತನಾಡಿದ್ದೇನೆ. ಅವರು 15 ರಿಂದ 25 ಲಕ್ಷ ರೂಪಾಯಿ ಕೊಟ್ಟಿದ್ದಾರೆ. ನಾವೆಲ್ಲಾ ಸಾರ್ವಜನಿಕ ಜೀವನದಲ್ಲಿ ಇರುವವರು. ಮದುವೆ ಅಥವಾ ಯಾವುದೋ ಕಾರ್ಯಕ್ರಮಕ್ಕೆ ಗಿಫ್ಟ್‌ಗಳು ಕೊಟ್ಟಿರಬಹುದು. ಆ ಹೆಣ್ಣುಮಗಳು (ರನ್ಯಾ ರಾವ್) ಯಾರೋ ತಪ್ಪು ಮಾಡಿದ್ದರೆ ಅವರ ವಿರುದ್ಧ ಕ್ರಮವಾಗಲಿ. ಗಿಫ್ಟ್ ಏನಾದರೂ ಕೊಟ್ಟಿದ್ರೆ ಮದುವೆಗೆ ಕೊಟ್ಟಿರಬಹುದು. ಪರಮೇಶ್ವರ ಅವರು ಗೌರವಾನ್ವಿತ ವ್ಯಕ್ತಿ. ಅವರ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ನಾವು ಅವರ ಜತೆ ಇರುತ್ತೇವೆ. ಪರಮೇಶ್ವರ್ ಆರೋಗ್ಯವಾಗಿದ್ದು, ಕ್ಯಾಬಿನೆಟ್‌ಗೆ ಬರುತ್ತಾರೆ ಎಂದು ಡಿಕೆಶಿ ಹೇಳಿದರು.