ಹೊಸದಿಗಂತ ವರದಿ, ವಿಜಯಪುರ:
ಕೊಲ್ಹಾರ, ಬಸವನಬಾಗೇವಾಡಿ ತಾಲೂಕಿನಲ್ಲಿನ ಅಭಿವೃದ್ಧಿ ಯೋಜನೆಗಳ ಬಗ್ಗೆ ಬಹಿರಂಗ ಚರ್ಚೆ ನಡೆಯಲಿ. ಪೆಂಡಾಲ್ ಸಹ ನಾನೇ ಹಾಕುವೆ, ಸಚಿವ ಶಿವಾನಂದ ಪಾಟೀಲ ಚರ್ಚೆಗೆ ಬರಲಿ ಸಾಕು. ನಾನು ಬೇಜವಾಬ್ದಾರಿತನದಿಂದ ಮಾತನಾಡುವುದಿಲ್ಲ, ಅವರು ವೇದಿಕೆಗೆ ಬರಲಿ, ನಾನೂ ಬರುವೆ, ಈ ಸಾಧನೆ ಅವರ ಸಾಧನೆ ಎಂದು ಸಚಿವ ಶಿವಾನಂದ ಪಾಟೀಲರು ಸಾಬೀತು ಪಡಿಸಿದರೆ ಅಲ್ಲಿಯೇ ಪಿಸ್ತೂಲ್ ನಿಂದ ಹೊಡೆದುಕೊಂಡು ನಾನು ಪ್ರಾಣ ಬಿಡುವೆ. ಇಲ್ಲ ಅವರು ಪಿಸ್ತೂಲಿನಿಂದ ಹೊಡೆದುಕೊಂಡು ಪ್ರಾಣ ಬಿಡಬೇಕು ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಪಂಥಾಹ್ವಾನ ನೀಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾವ ಹೋರಾಟ, ಯಾವ ಯೋಜನೆ ಮಾಡಿಲ್ಲ ಎಂದು ಸಾಬೀತಾದರೆ ನಾನು ಸಾಯುತ್ತೇನೆ, ಸಾವಿಗೆ ನಾನು ಹೆದರುವ ಮಗನಲ್ಲ, ಈ ಸವಾಲು ಅವರು ಸ್ವೀಕರಿಸಲಿ ಎಂದರು.
ಜಿಲ್ಲೆಯ ಕೊರ್ತಿ- ಕೊಲ್ಹಾರ ಸೇತುವೆ ನಿರ್ಮಾಣ, ನೀರಾವರಿ ಯೋಜನೆ ಅನುಷ್ಠಾನ, ಹೊಸ ತಾಲೂಕುಗಳ ರಚನೆ, ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಎನ್ ಟಿಪಿಸಿಎಲ್ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳು ನನ್ನ ಹೋರಾಟ ಹಾಗೂ ನಾನು ಬಸವನಬಾಗೇವಾಡಿ ಶಾಸಕನಾಗಿದ್ದಾಗ ಅನುಷ್ಠಾನಗೊಂಡಿವೆ. ಆದರೆ ಇವೆಲ್ಲ ಸಾಕಾರಗೊಳ್ಳಲು ಸಚಿವ ಶಿವಾನಂದ ಪಾಟೀಲರ ಪಾತ್ರ ಎಳ್ಳುಕಾಳಿನಷ್ಟು ಇಲ್ಲ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಕಲ್ಲಪ್ಪ ಸೊನ್ನದ, ಇಸ್ಮಾಯಿಲ್ ತಹಶೀಲ್ದಾರ್, ಪರಶುರಾಮ ಗಣಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.