ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಣಿಕರು ಅರಣ್ಯ ಪ್ರದೇಶದೊಳಗಿನ ರಸ್ತೆಯಲ್ಲಿ ಸಾಗುವ ಸಮಯ ವಾಹನದಿಂದ ಇಳಿದು ವನ್ಯಜೀವಿಯ ಫೋಟೋ ತೆಗೆಯುವುದು, ಸೆಲ್ಫಿ ತೆಗೆಯುವ ಸಾಹಸ ಮಾಡಿದರೆ ಇಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.
ಚಾರ್ಮಾಡಿ ಘಾಟಿನಾಲ್ಕನೇ ತಿರುವಿನಲ್ಲಿ ಗುರುವಾರ ಬೆಳಗ್ಗೆ ಕೆಲವು ಪ್ರವಾಸಿಗರು ಆನೆಯ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ ಅವರು , ಅರಣ್ಯ ಮಾರ್ಗದಲ್ಲಿ ಸಂಚರಿಸುವಾಗ ವಾಹನಗಳಿಂದ ಕೆಳಗೆ ಇಳಿಯುವುದು ಅಪರಾಧವಾಗಿದ್ದು, ಆ ವಾಹನದ ನೋಂದಣಿ ಸಂಖ್ಯೆ ಪತ್ತೆ ಮಾಡಿ, ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದ್ದಾರೆ.
ಅರಣ್ಯ ಇಲಾಖೆಯು ಮಾನವ ಹಾಗೂ ವನ್ಯಜೀವಿ ಸಂಘರ್ಷ ನಿಯಂತ್ರಿಸಲು ಶ್ರಮಿಸುತ್ತಿದೆ. ಈ ರೀತಿ ಸೆಲ್ಫಿ ತೆಗೆದುಕೊಳ್ಳುವಾಗ, ಫೋಟೋ ತೆಗೆಯುವಾಗ ಅನಾಹುತ ಸಂಭವಿಸುವ ಅಪಾಯ ಇರುತ್ತದೆ. ಯಾರೂ ತಮ್ಮ ಅಮೂಲ್ಯ ಜೀವದೊಂದಿಗೆ ಚೆಲ್ಲಾಟ ಆಡಬಾರದು ಎಂದು ಮನವಿ ಮಾಡಿದ್ದಾರೆ.