ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಕಳೆದ 20 ದಿನಗಳ ಅವಧಿಯಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದ್ದು, 2025ನೇ ಸಾಲಿನಲ್ಲಿ ಇಲ್ಲಿಯವರೆಗೆ ಒಟ್ಟು 35 ಸಕ್ರಿಯ ಪ್ರಕರಣಗಳಿದ್ದು, ಅವುಗಳ ಪೈಕಿ 32 ಪ್ರಕರಣಗಳು ಬೆಂಗಳೂರು ನಗರದಲ್ಲಿ ವರದಿಯಾಗಿವೆ. ಪ್ರಸ್ತುತ, ಕೋವಿಡ್ 19 ಪರಿಸ್ಥಿತಿಯು ಹತೋಟಿಯಲ್ಲಿದ್ದು ಸಾರ್ವಜನಿಕರು ಅನಗತ್ಯ ಭಯಪಡುವ ಅಗತ್ಯವಿಲ್ಲ, ಆದರೆ ಎಚ್ಚರಿಕೆಯನ್ನು ವಹಿಸುವುದು ಅಗತ್ಯವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಗರ್ಭಿಣಿಯರು, ಮಕ್ಕಳು, ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಮುಂಜಾಗ್ರತಾ ಕ್ರಮವಾಗಿ ಜನನಿಬಿಡ ಪ್ರದೇಶಗಳಿಗೆ ತೆರಳುವಾಗ ಮಾಸ್ಕ್ ಧರಿಸುವುದು ಸೂಕ್ತವಾಗಿದೆ. ಕೋವಿಡ್ ಮುಂಜಾಗ್ರತೆಗಾಗಿ ಸೂಕ್ತ ಕ್ರಮಗಳಾದ ಕೈಗಳ ಸ್ವಚ್ಛತೆ, ಹ್ಯಾಂಡ್ ಸ್ಯಾನಿಟೈಸರ್ ನ ಬಳಕೆ, ಇತ್ಯಾದಿಗಳನ್ನು ಪಾಲಿಸುವುದು ಅಗತ್ಯವಾಗಿದೆ ಎಂದು ತಿಳಿಸಿದೆ.
Severe Acute Respiratory Illness ( SARI ) ಲಕ್ಷಣಗಳನ್ನು ಹೊಂದಿರುವವರು, ಆದ್ಯತೆಯ ಮೇಲೆ ಕೋವಿಡ್ – 19 ಪರೀಕ್ಷೆಗೆ ಒಳಪಡುವುದರಿಂದ, ಸೂಕ್ತ ಚಿಕಿತ್ಸೆ ಪಡೆಯುವುದರೊಂದಿಗೆ ಕೋವಿಡ್ ಪ್ರಸರಣವನ್ನು ನಿಯಂತ್ರಿಸಬಹುದಾಗಿದೆ.
9 ತಿಂಗಳ ಮಗುವಿಗೂ ಪಾಸಿಟಿವ್
ಕಳೆದ ವಾರ ಬೆಂಗಳೂರು ಗ್ರಾಮಾಂತರದಲ್ಲಿ ಹೊಸಕೋಟೆ ಮೂಲದ 9 ತಿಂಗಳ ಮಗುವಿಗೆ ಜ್ವರ ಬಂದಿದ್ದು, ಪಿಟ್ಸ್ ಕೂಡ ಬಂದಿದೆ. ಕೂಡಲೇ, ಮಗುವಿನ ಪೋಷಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ವಾಣಿವಿಲಾಸ ಮಕ್ಕಳ ಆಸ್ಪತ್ರೆಗೆ ರವಾನಿಸಿದ್ದಾರೆ. ಆಗ ಮಗುವನ್ನು ಕೋವಿಡ್ -19 ಪರೀಕ್ಷೆಗೆ ಒಳಪಡಿಸಿದಾಗ ಕಪಾಸಿಟಿವ್ ಬಂದಿತ್ತು. ಇದಾದ ನಂತರ ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ.