ಮಂಗಳೂರು ಹೊರವಲಯದ ಪಿಲಿಕುಳ ನಿಸರ್ಗಧಾಮಕ್ಕೆ ಲೋಕಾಯುಕ್ತ ಅಧಿಕಾರಿಗಳ‌ ತಂಡ ದಾಳಿ

ಹೊಸದಿಗಂತ ಮಂಗಳೂರು:

ಮಂಗಳೂರು ನಗರದ ಹೊರವಲಯದಲ್ಲಿರುವ ‘ಪಿಲಿಕುಳ’ ನಿಸರ್ಗಧಾಮದ ಅಡಳಿತ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಹಠಾತ್ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ಮಂಗಳೂರು ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕಿ ಡಾ. ಗಾನ ಪಿ ಕುಮಾರ್, ಸುರೇಶ್ ಕುಮಾರ್ ಪಿ. ಹಾಗೂ ಪೊಲೀಸ್ ನಿರೀಕ್ಷಕಿ ಭಾರತಿ ಜಿ., ಚಂದ್ರಶೇಖರ್ ಕೆ. ಎನ್. ಅವರುಗಳು ತಮ್ಮ ಸಿಬ್ಬಂದಿಗಳೊಂದಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ (ಪ್ರಭಾರ) ಕುಮಾರಚಂದ್ರ, “ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಡಳಿತದಲ್ಲಿ ಸಾಕಷ್ಟು ಲೋಪದೋಷಗಳು ಕಂಡುಬಂದಿದ್ದು, ಮೃಗಾಲಯದಿಂದ ಹೆಚ್ಚಿನ ಆದಾಯ ಬರುತ್ತಿದ್ದರೂ ಪ್ರಾಧಿಕಾರ, ಇದನ್ನು ಮೃಗಾಲಯದ ಅಭಿವೃದ್ದಿಗೆ ವೆಚ್ಚ ಮಾಡುತ್ತಿರುವುದು ಕಂಡುಬರುವುದಿಲ್ಲ. ಸಿಬ್ಬಂದಿಗಳಿಗೆ ಕಡಿಮೆ ವೇತನ ನೀಡುತ್ತಿದ್ದು, ಯಾವುದೇ ಆರೋಗ್ಯ ಸೌಲಭ್ಯವನ್ನು ಒದಗಿಸದೆ ಇರುವುದು ಕಂಡುಬರುತ್ತದೆ. ಮೃಗಾಲಯದ ನಿರ್ವಹಣೆಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಆದೇಶವಾಗಿದ್ದರೂ ಕೂಡ ಪ್ರಾಧಿಕಾರವು ಈ ವರೆಗೂ ಹಸ್ತಾಂತರಿಸದೆ ವಿಳಂಬ ಧೋರಣೆ ಮಾಡಿರುವುದು ಕಂಡುಬರುತ್ತದೆ. ಲೀಸ್ ಗೆ ಕೊಟ್ಟ ಕೆಲವು ಸಂಸ್ಥೆಗಳಿಂದ ಪ್ರಾಧಿಕಾರವು ತೆರಿಗೆ ಹಣ ಸಂಗ್ರಹಿಸದೆ ಇರುವುದು ಕಂಡುಬರುತ್ತದೆ. ಟೆಂಡರ್ ಪ್ರಕ್ರಿಯೆಯಲ್ಲಿ ಲೋಪ ಕಂಡುಬರುತ್ತಿದ್ದು ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಸಮಗ್ರ ವರದಿಯನ್ನು ಲೋಕಾಯುಕ್ತ ಕೇಂದ್ರ ಕಚೇರಿಗೆ ಸಲ್ಲಿಸಲಾಗುವುದು” ಎಂದು  ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!