ವಾಡಿಕೆಗೂ ಮೊದಲೇ ಕೇರಳಕ್ಕೆ ಮುಂಗಾರು ಪ್ರವೇಶ: ವಿವಿದೆಡೆ ಭಾರೀ ಮಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ಕರಾವಳಿಗೆ ಇಂದು ನೈಋತ್ಯ ಮಾನ್ಸೂನ್ ಪ್ರವೇಶವಾಗಿದೆ.

ಭಾರತೀಯ ಹವಾಮಾನ ಇಲಾಖೆ ಮೇ 27ಕ್ಕೆ ಮುಂಗಾರು ಮಾರುತಗಳು ಕೇರಳ ಕರಾವಳಿ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹೇಳಿತ್ತು. ಆದರೆ 3 ದಿನದ ಮೊದಲೇ ಮುಂಗಾರು ಪ್ರವೇಶವಾಗಿದ್ದು ರೈತರು ಸಂತಸಗೊಂಡಿದ್ದಾರೆ.

ಸಾಮಾನ್ಯವಾಗಿ, ನೈಋತ್ಯ ಮಾನ್ಸೂನ್ ಜೂನ್ 1ರ ಬಳಿಕ ಕೇರಳಕ್ಕೆ ಪ್ರವೇಶವಾಗಲಿದೆ. ಜುಲೈ 8ರ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ. ಕಳೆದ ವರ್ಷ ಮೇ 30ರಂದು ದಕ್ಷಿಣ ರಾಜ್ಯದ ಮೇಲೆ ಮಾನ್ಸೂನ್ ಪ್ರವೇಶಿಸಿತು.

ಐಎಂಡಿ ಪ್ರಕಾರ, ಮುಂಗಾರು ಕೇರಳದಲ್ಲಿ ಮಾತ್ರವಲ್ಲದೆ ಕರ್ನಾಟಕದ ಕೆಲವು ಭಾಗಗಳು, ಪುದುಚೇರಿ, ತಮಿಳುನಾಡು ಮತ್ತು ಮಿಜೋರಾಂನಲ್ಲಿಯೂ ಆಗಮಿಸಿದೆ. ಇದು ವೇಗವಾಗಿ ಮುಂದುವರಿಯುತ್ತಿದ್ದು, ಮುಂದಿನ 2-3 ದಿನಗಳಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡಿನ ಉಳಿದ ಪ್ರದೇಶಗಳು ಹಾಗೂ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನ ಕೆಲವು ಭಾಗಗಳನ್ನು ತಲುಪುವ ನಿರೀಕ್ಷೆಯಿದೆ.

ಕಳೆದ 25 ವರ್ಷಗಳಲ್ಲಿ, ಅತ್ಯಂತ ವಿಳಂಬವಾದ ಆಗಮನ 2016ರಲ್ಲಿ ಸಂಭವಿಸಿತ್ತು. ಆಗ ಮಾನ್ಸೂನ್ ಜೂನ್ 9ರಂದು ಕೇರಳವನ್ನು ಪ್ರವೇಶಿಸಿತ್ತು. ಕಳೆದ ಎರಡು ದಿನಗಳಿಂದ ಕೇರಳ ರಾಜ್ಯದಲ್ಲಿ ಮಾನ್ಸೂನ್ ಆರಂಭಕ್ಕೆ ಅನುಕೂಲಕರವಾದ ಎಲ್ಲಾ ಪರಿಸ್ಥಿತಿಗಳು ಅಭಿವೃದ್ಧಿಗೊಂಡಿವೆ. ಕಡಿಮೆ ಒತ್ತಡದ ಪ್ರದೇಶ ಮತ್ತು ಮುಂದುವರಿಯುತ್ತಿರುವ ಮಾನ್ಸೂನ್ ವ್ಯವಸ್ಥೆಯ ಸಂಯೋಜನೆಯಿಂದಾಗಿ ಕೇರಳದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!