ಹೊಸದಿಗಂತ ವರದಿ, ಅಂಕೋಲಾ:
ಭೂಗತ ಜಗತ್ತಿನ ವೈಭವೀಕರಣ, ಮಚ್ಚು,ಚಾಕು, ಚೂರಿಗಳು ಸಿನೆಮಾಗಳ ಕಥಾ ವಸ್ತುವಾದರೆ ಸಮಾಜಕ್ಕೆ ಅಪಾಯಕಾರಿ ಸಂದೇಶ ನೀಡಿದಂತಾಗುತ್ತದೆ ಪ್ರೀತಿ,ಪ್ರೇಮ, ಸ್ನೇಹ, ಭಾಂದವ್ಯಗಳನ್ನು ಬಿಂಬಿಸುವಂತ ಚಲನಚಿತ್ರಗಳು ಹೆಚ್ಚಬೇಕು ರಾಜ್ಯದ ಇತಿಹಾಸದಲ್ಲಿ ನಡೆದ ಹಲವಾರು ಘಟನೆಗಳು ಚಲನಚಿತ್ರಗಳಿಗೆ ಉತ್ತಮ ಕಥಾವಸ್ತು ಆಗಬಲ್ಲದು ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಹೇಳಿದರು.
ಪಟ್ಟಣದಲ್ಲಿ ಬೆಳೆಗಾರರ ಸಮಿತಿ ವತಿಯಿಂದ ನಡೆದ ಮಾವು ಮೇಳದಲ್ಲಿ ಪಾಲ್ಗೊಂಡು ತಮ್ಮ ಚಿತ್ರರಂಗದ ಅನುಭವಗಳನ್ನು ಹಂಚಿಕೊಂಡ ಅವರು, ಮುತ್ತಿನಹಾರ ಚಲನಚಿತ್ರದಿಂದ ಹಲವಾರು ಯುವ ಜನರು ದೇಶ ಸೇವೆಗಾಗಿ ಭಾರತೀಯ ಸೇನೆಗೆ ಸೇರಲು ಪ್ರೇರಣೆಯಾಯಿತು ಹೀಗೆ ಸಮಾಜಕ್ಕೆ ಪ್ರೇರಣೆಯಾಗುವಂತ ಚಲನಚಿತ್ರಗಳ ಅಗತ್ಯತೆ ಇದೆ ಎಂದರು.
ದೇಶ ಪ್ರೇಮದ ಕಥಾ ಹಂದರ ಹೊಂದಿರುವ ಚಲನಚಿತ್ರ ನಿರ್ಮಾಣದ ಯೋಜನೆಯಿದ್ದು ಉತ್ತರ ಕನ್ನಡ ಜಿಲ್ಲೆಯ ನೌಕಾನೆಲೆ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ಅನುಮತಿ ದೊರಕಿದರೆ ಚಿತ್ರೀಕರಣ ನಡೆಸುವುದಾಗಿ ಹೇಳಿದ ಅವರು, ಕರಾವಳಿ ಭಾಗದಲ್ಲಿ ಆಳ್ವಿಕೆ ನಡೆಸಿದ್ದ ರಾಣಿ ಚೆನ್ನಭೈರಾದೇವಿಯವರ ಹೋರಾಟದ ಕಥೆಯನ್ನು ಚಲನಚಿತ್ರವಾಗಿಸುವ ವಿಚಾರವಿದೆ
ಅದು ಸಹ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ರಾಜೇಂದ್ರ ಸಿಂಗ್ ಬಾಬು ತಿಳಿಸಿದರು.
ಅಂಕೋಲಾ ತಾಲೂಕಿನ ಸುತ್ತ ಮುತ್ತಲು ನಡೆದ ಸ್ವಾತಂತ್ರ್ಯ ಹೋರಾಟ, ಹೋರಾಟಗಾರರ ಜೀವನ ಎಲ್ಲವೂ ಸಹ ಉತ್ತಮ ಕಥಾವಸ್ತುವಾಗಿದ್ದು ತೆರೆಯ ಮೇಲೆ ಮೂಡಿ ಬಂದು ಜನರ ಮನ ಮುಟ್ಟುವಂತಾಗಬೇಕು ಹೊಡೆದಾಟದ ಕಥೆಗಳನ್ನು ಬಿಟ್ಟು ಸಮಾಜದಲ್ಲಿ ನಡೆದ ನೈಜ್ಯ ಹೋರಾಟಗಳತ್ತ ಚಿತ್ರರಂಗ ಗಮನ ಹರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.