ವಿಮಾನ ಲ್ಯಾಂಡಿಂಗ್, ಟೇಕಾಫ್ ಸಮಯ ಕಿಟಕಿ ಮುಚ್ಚಿ: ಏರ್‌ಲೈನ್ಸ್‌ಗಳಿಗೆ DGCA ಆದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಪರೇಷನ್ ಸಿಂದೂರ ಕಾರ್ಯಾಚರಣೆ ಬಳಿಕ ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ನೀಡಿದ ಆರೋಪದ ಮೇಲೆ ಕೆಲವರನ್ನ ಬಂಧಿಸಿ ವಿಚಾರಣೆ ಕೂಡ ನಡೆಸಲಾಗಿದೆ. ಇದೀಗ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ಎಲ್ಲಾ ವಾಣಿಜ್ಯ ಏರ್‌ಲೈನ್ಸ್‌ಗಳಿಗೆ ಮಹತ್ವದ ಆದೇಶ ನೀಡಿದೆ.

ದೇಶದ ಪಶ್ಚಿಮ ಗಡಿಯಲ್ಲಿರುವ ಏರ್‌ಪೋರ್ಟ್‌ಗಳಲ್ಲಿ ವಿಮಾನದ ಕಿಟಕಿ ಮುಚ್ಚಲು DGCA ಆದೇಶ ನೀಡಿದೆ. ಡಿಫೆನ್ಸ್ ವಿಮಾನ ನಿಲ್ದಾಣಗಳಲ್ಲಿ ವಿಮಾನ ಲ್ಯಾಂಡಿಂಗ್, ಟೇಕಾಫ್ ವೇಳೆ ವಿಮಾನಗಳ ಕಿಟಕಿ ಮುಚ್ಚಲು ಎಲ್ಲಾ ಏರ್‌ಲೈನ್ಸ್‌ಗಳಿಗೆ ಸೂಚಿಸಿದೆ.

ಇತ್ತ ಭಾರತದ ರಕ್ಷಣಾ ಸ್ಥಳಗಳನ್ನು ಪ್ರಯಾಣಿಕರು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡುವ ಸಾಧ್ಯತೆ ಇದೆ. ಹೀಗಾಗಿ ಡಿಫೆನ್ಸ್ ವಿಮಾನ ನಿಲ್ದಾಣಗಳಲ್ಲಿ ವಿಮಾನ 10 ಸಾವಿರ ಅಡಿ ಎತ್ತರಕ್ಕೆ ಹೋಗುವವರೆಗೂ ಕಿಟಕಿ ಮುಚ್ಚಲು ಆದೇಶಿಸಲಾಗಿದೆ.

ನಮ್ಮ ದೇಶದಲ್ಲಿ ಕೆಲ ಡಿಫೆನ್ಸ್ ಏರ್ ಪೋರ್ಟ್‌ಗಳನ್ನು ನಾಗರಿಕ ವಿಮಾನಯಾನಕ್ಕೂ ಬಳಕೆ ಮಾಡಲಾಗುತ್ತದೆ. ಹೀಗಾಗಿ ಡಿಫೆನ್ಸ್ ಸ್ಥಳಗಳ ವಿವರ ಸೋರಿಕೆಯಾಗದಂತೆ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಏರ್ ಪೋರ್ಟ್‌ಗಳಲ್ಲಿ ಫೋಟೋ, ವಿಡಿಯೋ ತೆಗೆಯದಂತೆ ಅಲರ್ಟ್ ಮಾಡಬೇಕು. ಈ ಆದೇಶದ ಬಗ್ಗೆ ಪ್ರಯಾಣಿಕರಿಗೆ ಮುಂಚಿತವಾಗಿಯೇ ತಿಳಿಸಬೇಕು.

ವಿಡಿಯೋ, ಫೋಟೋ ತೆಗೆದ ಪ್ರಯಾಣಿಕರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಲಾಗಿದೆ. ತುರ್ತು ನಿರ್ಗಮನದ ವೇಳೆ ಮಾತ್ರ ಈ ನಿಯಮಕ್ಕೆ ಇದೀಗ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ವಿನಾಯಿತಿ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!