ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾರ್ವಜನಿಕರಿಗೆ ಜೂನ್ 1ರಿಂದ ವಿಧಾನಸೌಧ ಟೂರ್ ಗೈಡ್ ಪ್ರಾರಂಭವಾಗಲಿದ್ದು, ಪ್ರವಾಸೋದ್ಯಮ ಇಲಾಖೆ ಕೆಎಸ್‌ಟಿಡಿಸಿ ಮಾರ್ಗಸೂಚಿ ಜೊತೆಗೆ ಶುಲ್ಕದ ವಿವರವನ್ನು ಬಿಡುಗಡೆ ಮಾಡಿದೆ.
ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಎನ್ನುವಂತೆ ವಿಧಾನಸೌಧ ಹಾಗೂ ವಿಧಾನಸಭೆಯ ಸಭಾಂಗಣ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸುವಂತ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಈ ಸಂಬಂಧ ನಾಳೆ ಪ್ರವಾಸೋದ್ಯಮ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ವಿಧಾನಸೌಧ ಗೈಡೆಡ್ ಟೂರ್ ಗೆ ಚಾಲನೆ ನೀಡಲಾಗುತ್ತಿದೆ.
ಜೂನ್.1ರಿಂದ ಸಾರ್ವಜನಿಕರಿಗೆ ವಿಧಾನಸೌಧ ಟೂರ್ ಗೈಡ್ ಪ್ರಾರಂಭವಾಗಲಿದೆ. ಆದರೇ ಇದಕ್ಕಾಗಿ ಸಾರ್ವಜನಿಕರು ಶುಲ್ಕವನ್ನು ನೀಡಿ ಹೋಗಬೇಕಾಗಿದೆ.
ವಯಸ್ಕರಿಗೆ ರೂ.50, 16 ವರ್ಷ ಮೇಲ್ಪಟ್ಟವರಿಗೆ ರೂ.50, 15 ವರ್ಷ ಕೆಳಗಿನ ಮಕ್ಕಳಿಗೆ ಉಚಿತ ಪ್ರವೇಶವಾಗಿದೆ. ಪ್ರತಿ ಭಾನುವಾರ, 2 ಮತ್ತು 4ನೇ ಶನಿವಾರ ವಿಧಾನಸೌಧ ಟೂರ್ ವ್ಯವಸ್ಥೆ ಇರಲಿದ್ದು, ಬೆಳಗ್ಗೆ 8 ರಿಂದ ಸಂಜೆ 5 ಗಂಟೆಗೆ ಸಮಯ ನಿಗದಿಪಡಿಸಲಾಗಿದೆ. ವಿಧಾನಸೌಧದ ಗೇಟ್ ನಂ.3ನಲ್ಲಿ ಮಾತ್ರವೇ ಪ್ರವೇಶಕ್ಕೆ ಅವಕಾಶವಿದೆ.
ಅಂದಹಾಗೇ 30 ಜನರನ್ನು ಒಳಗೊಂಡ ಗ್ರೂಪ್ ಅನ್ನು ಪ್ರತಿ ಪ್ರವಾಸಕ್ಕೆ ನಿಗದಿ ಮಾಡಲಾಗಿದೆ. ಒಂದು ಗ್ರೂಪ್ ಗೆ 90 ನಿಮಿಷಗಳ ಪ್ರವಾಸದ ಅವಕಾಶವನ್ನು ಕಲ್ಪಿಸಲಾಗುತ್ತದೆ. ಒಂದು ದಿನಕ್ಕೆ 300 ಜನರಿಗೆ ಮಾತ್ರವೇ ಪ್ರವೇಶಕ್ಕೆ ಅವಕಾಶವಿದ್ದು, ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಮಾಹಿತಿಯನ್ನು ನೀಡಲಾಗುತ್ತದೆ.