ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಹವಾಮಾನ ಇಲಾಖೆ ಕೇರಳ ಮತ್ತು ಮಹಾರಾಷ್ಟ್ರದ ಹಲವಾರು ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಿದೆ. ನೈಋತ್ಯ ಮಾನ್ಸೂನ್ ಅಧಿಕೃತವಾಗಿ ಸಾಮಾನ್ಯಕ್ಕಿಂತ ಮೊದಲೇ ಕೇರಳವನ್ನು ತಲುಪಿರುವುದರಿಂದ ಮುಂದಿನ ಕೆಲವು ದಿನಗಳಲ್ಲಿ ಈ ನಗರಗಳಲ್ಲಿ ಭಾರೀ ಮಳೆ, ಗುಡುಗು ಸಹಿತ ಮಳೆ ಮತ್ತು ಬಲವಾದ ಗಾಳಿ ಬೀಸುವ ನಿರೀಕ್ಷೆಯಿದೆ.
ಏತನ್ಮಧ್ಯೆ, ದೆಹಲಿಯಲ್ಲಿ ತಡರಾತ್ರಿ ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಾಗಿದ್ದು, ರಾಷ್ಟ್ರ ರಾಜಧಾನಿಯ ಕೆಲವು ಪ್ರದೇಶಗಳಲ್ಲಿ ನೀರು ನಿಂತಿದ್ದು, ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ರತ್ನಗಿರಿ ಮತ್ತು ದಪೋಲಿ ನಡುವೆ ವಾಯುಭಾರ ಕುಸಿತ ಉಂಟಾಗಿದ್ದು, ಭಾರೀ ಮಳೆ, ಗುಡುಗು ಸಹಿತ ಬಲವಾದ ಗಾಳಿ ಬೀಸುತ್ತಿರುವುದರಿಂದ ಮಹಾರಾಷ್ಟ್ರದ ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳಿಗೆ ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ. ಪಶ್ಚಿಮ ಮಹಾರಾಷ್ಟ್ರದ ಸತಾರಾ ಮತ್ತು ಕೊಲ್ಲಾಪುರ ಕೂಡ ರೆಡ್ ಅಲರ್ಟ್ ಘೋಷಿಸಲಾಗಿದೆ.