ಮಳೆ ಬರೋವಾಗ ಕಾಫಿ ಜೊತೆ ಚಕ್ಕುಲಿ ಇದ್ರೆ ಅದರ ಮಜಾನೇ ಬೇರೆ. ಈ ಚಕ್ಕುಲಿ ರಾಗಿಯದ್ದಾಗಿದ್ರೆ ಆರೋಗ್ಯಕ್ಕೆ ಇನ್ನು ಬೆಸ್ಟ್. ಇವತ್ತು ನಾವು ರಾಗಿ ಚಕ್ಕುಲಿ ಮಾಡೋದು ಹೇಗೆ ಅಂತ ನೋಡೋಣ.
ಬೇಕಾಗುವ ಸಾಮಗ್ರಿಗಳು:
ರಾಗಿ ಹಿಟ್ಟು- ಎರಡು ಕಪ್
ಅಕ್ಕಿ ಹಿಟ್ಟು- ಒಂದು ಕಪ್
ಹುರಿಗಡಲೆ- ಅರ್ಧ ಕಪ್ (ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ)
ಮೆಣಸಿನಪುಡಿ- ಒಂದು ಟೀ ಚಮಚ
ರುಚಿಗೆ ತಕ್ಕಷ್ಟು ಉಪ್ಪು
ನೀರು- ಬೇಕಾಗುವಷ್ಟು
ಬಿಳಿ ಎಳ್ಳು- ಕಾಲು ಕಪ್
ಜೀರಿಗೆ- ಒಂದು ಚಿಟಿಕೆ
ತುಪ್ಪ- ಎರಡು ಚಮಚ
ಕರಿಯಲು ಅಡುಗೆ ಎಣ್ಣೆ
ಮೊದಲು ರಾಗಿ ಹಿಟ್ಟನ್ನು ಕಡಿಮೆ ಉರಿಯಲ್ಲಿ ಹುರಿಯಿರಿ. ಅದನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
ಈಗ ಹುರಿಗಡಲೆಯನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ. ನಂತರ ರಾಗಿ ಹಿಟ್ಟನ್ನು ದೊಡ್ಡ ಬಟ್ಟಲಿನಲ್ಲಿ ಹಾಕಿ. ಅದಕ್ಕೆ ಹುರಿಗಡಲೆ ಪುಡಿಯನ್ನು ಹಾಕಿ. ನಂತರ ಅಕ್ಕಿ ಹಿಟ್ಟು, ಮೆಣಸಿನಕಾಯಿ, ಉಪ್ಪು, ಬಿಳಿ ಎಳ್ಳು ಮತ್ತು ಇಂಗು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಈ ಹಿಟ್ಟಿಗೆ ಸೇರಿಸಲು ತುಪ್ಪವನ್ನು ಬಿಸಿ ಮಾಡಿ. ಬಿಸಿಯಾದ ನಂತರ ಹಿಟ್ಟಿಗೆ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ನಂತರ ಸ್ವಲ್ಪ ನೀರು ಸೇರಿಸಿ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ. ಮೃದುವಾಗುವವರೆಗೆ ಹಿಟ್ಟನ್ನು ಬೆರೆಸಿಕೊಳ್ಳಿ.
ಈಗ ಚಕ್ಕುಲಿ ಮಾಡುವ ಮೆಷಿನ್ಗೆ ಈ ಹಿಟ್ಟನ್ನು ಹಾಕಿ. ಎಣ್ಣೆ ಚೆನ್ನಾಗಿ ಕಾದ ನಂತರ, ಇದನ್ನು ಎಣ್ಣೆಯಲ್ಲಿ ಬಿಟ್ಟು ಎರಡೂ ಕಡೆಗೂ ತಿರುಗಿಸಿ ಫ್ರೈ ಮಾಡಿದರೆ ರಾಗಿ ಚಕ್ಕುಲಿ ರೆಡಿ.