ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಡ್ರೆಸ್‌ನಲ್ಲಿ ಸಿಂಗಲ್ ಡಿಜಿಟ್ ತಪ್ಪಾಗಿದ್ದಕ್ಕೆ ಗ್ರಾಹಕನ ಮೇಲೆ ಡೆಲಿವರಿ ಬಾಯ್ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಸವೇಶ್ವರ ನಗರ ಪೊಲೀಸರು ಡೆಲಿವರಿ ಬಾಯ್‌ನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ವಿಷ್ಣುವರ್ಧನ್ ಎಂದು ಗುರುತಿಸಲಾಗಿದ್ದು, ಗ್ರಾಹಕ ಶಶಾಂಕ್ ಅವರ ಮೇಲೆ ಹಲ್ಲೆ ನಡೆಸಿದ್ದ.ಆರೋಪಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದು, ಆರ್ಡರ್ ಡೆಲಿವರಿಗೆ ಹೋದಾಗ ಅದರಲ್ಲಿ ಪಕ್ಕದ ಮನೆ ಅಡ್ರೆಸ್ ಇತ್ತು, ಇದರಿಂದ ವಿಳಾಸ ಯಾಕೆ ತಪ್ಪಾಗಿ ನೀಡಿದ್ದೀರಿ ಎಂದು ಮಹಿಳೆಯನ್ನು ಕೇಳಿದ್ದೆ. ಈ ವೇಳೆ ಶಶಾಂಕ್ ಬಂದು ನನ್ನ ಜೊತೆ ಗಲಾಟೆ ಮಾಡಿದ್ದರು. ಹೀಗಾಗಿ ಕೋಪದಿಂದ ಅವರ ಮೇಲೆ ಹಲ್ಲೆ ಮಾಡಿದೆ ಎಂದು ಡೆಲಿವರಿ ಬಾಯ್ ಹೇಳಿಕೊಂಡಿದ್ದಾನೆ.
ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಮೇ 21ರಂದು ಈ ಘಟನೆ ನಡೆದಿತ್ತು. ಆ್ಯಪ್‌ವೊಂದರಲ್ಲಿ ಹಲ್ಲೆಗೊಳಗಾದ ಶಶಾಂಕ್ ಪತ್ನಿ ಆರ್ಡರ್ ಮಾಡಿದ್ದರು. ಡೆಲಿವರಿ ಬಾಯ್ ಬಂದಾಗ ಶಶಾಂಕ್ ನಾದಿನಿ ಸಾಮಗ್ರಿ ತೆಗೆದುಕೊಳ್ಳಲು ಹೋಗಿದ್ದರು. ಈ ವೇಳೆ ಅಡ್ರೆಸ್ ವಿಚಾರವಾಗಿ ಬಾಯಿಗೆ ಬಂದಹಾಗೇ ಮಾತಾಡುತ್ತಿದ್ದ. ಇದನ್ನು ಕೇಳಿಸಿಕೊಂಡು ಶಶಾಂಕ್ ಹೊರಗಡೆ ಹೋಗಿ ಆತನೊಂದಿಗೆ ಸ್ವಲ್ಪ ಜೋರಾಗಿ ಮಾತನಾಡಿದ್ದರು. ಆಗ ಒಮ್ಮೆಲೆ ಡೆಲಿವರಿ ಬಾಯ್ ಹಲ್ಲೆ ನಡೆಸಿದ್ದು, ಕಣ್ಣಿಗೆ ಗಾಯವಾಗಿತ್ತು. ಹಲ್ಲೆ ನಡೆಸಿದ ದೃಶ್ಯಗಳು ಅದೇ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.