ಹೊಸದಿಗಂತ ವರದಿ ಹಾಸನ :
ಸಕಲೇಶಪುರ ತಾಲ್ಲೂಕಿನಾದ್ಯಂತ ಮುಂದುವರಿದ ಭಾರಿ ಮಳೆಯಿಂದ ಅಪಾಯದ ಪ್ರದೇಶದಲ್ಲಿ ಮಕ್ಕಳ ಜೊತೆ ವಾಸ ಮಾಡುತ್ತಿರುವ ಕುಟುಂಬಗಳು ಅಪಾಯಕ್ಕೆ ಸಿಲುಕಿದ್ದು,ಅಲ್ಲಿಯ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.
ಮಳೆ ಹೆಚ್ಚಾದಂತೆ ಕ್ಷಣ ಕ್ಷಣಕ್ಖೂ ಮಲೆನಾಡಿಗರಲ್ಲಿ ಅಪಾಯದ ಭೀತಿ ಹೆಚ್ಚಾಗಿದೆ. ರಸ್ತೆ ನಿರ್ಮಾಣಕ್ಕೆ ಕಡಿದಾಗಿ ಮಣ್ಣು ಬಗೆದಿರುವ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆ ಬದಿಯ ಮಣ್ಣು ಕುಸಿದಂತೆ ಮನೆಗಳಿಗೆ ಅಪಾಯದ ಆತಂಕ
ಮೂಡಿದೆ.
ರಾಷ್ಟ್ರೀಯ ಹೆದ್ದಾರಿ 75.ಕ್ಕೆ ಹೊಂದಿಕೊಂಡಂತೆ ಸಕಲೇಶಪುರ ತಾಲ್ಲೂಕಿನ ಆನೆಮಹಲ್ ಬಳಿ
ಗುಡ್ಡದ ಮೇಲೆ ವಾಸ ಮಾಡುತ್ತಿರುವ ಕುಟುಂಬಗಳು ಅಪಾಯಕ್ಕೆ ಸಿಲುಕಿವೆ. ಇದೇ ಪ್ರದೇಶದಲ್ಲಿ ಪದೇ ಪದೇ ಮಣ್ಣು ಕುಸಿಯುತ್ತಿದ್ದು, ಅಪಾಯದ ಬಗ್ಗೆ ಮನವಿ ಮಾಡಿದರು ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಜನರ ಅಳಲು ತೋಡಿಕೊಂಡಿದ್ದಾರೆ.
ಅಧಿಕಾರಿಗಳು ಅಪಾಯ ಮುನ್ಸೂಚನೆ ಇದ್ದ ರಸ್ತೆ ಸಮೀಪವೇ ಇದ್ದ ಎಂಟು ಮನೆಗಳನ್ನು ಈಗಾಗಲೇ ಅಧಿಕಾರಿಗಳು ಸ್ಥಳಾಂತರ ಮಾಡಿದ್ದಾರೆ. ಇನ್ನೂ ಐದು ಕುಟುಂಬದ ಮನೆಗಳಿಗೆ ಪರಿಹಾರ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಅಧಿಕಾರಿಗಳ ಮೇಲೆ ಅಲ್ಲಿಯ ನಿವಾಸಿಗಳ ಗಂಭೀರ ಆರೋಪವಾಗಿದೆ.
ರಸ್ತೆಯಿಲ್ಲದ ಅಪಾಯದ ಪ್ರದೇಶದಲ್ಲಿ ಮಕ್ಕಳ ಜೊತೆ ವಾಸ ಮಾಡುತ್ತಿರುವ ಮನೆಯ ಸಮೀಪವು ಮಣ್ಣು ಕುಸಿಯುತ್ತಿದ್ದು,ಕುಟುಂಬಗಳು ನಿತ್ಯವೂ ಭಯದಲ್ಲಿಯೇ ಬದುಕುತ್ತಿವೆ. ಎರಡು ದಿನಗಳಿಂದ ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಮ್ಮನ್ನೂ ಸ್ಥಳಾಂತರ ಮಾಡಿ ಎಂದು ಬಡ ಕುಟುಂಬಗಳ ಮೊರೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.