ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಾಕ್ ಪರ ಬೇಹುಗಾರಿಕೆ ಮಾಡಿದ ಆರೋಪದ ಬಂಧನಕ್ಕೆ ಒಳಗಾಗಿರುವ ಜ್ಯೋತಿ ಮಲ್ಹೋತ್ರಾ ಗನ್ ಮ್ಯಾನ್‌ಗಳ ಸಹಾಯದಿಂದ ಪಾಕಿಸ್ತಾನದಲ್ಲಿ ಸುತ್ತಾಡಿದ ವಿಚಾರ ಬೆಳಕಿಗೆ ಬಂದಿದೆ.
‘ಕ್ಯಾಲಮ್ ಅಬ್ರಾಡ್ʼ ಹೆಸರಿನಲ್ಲಿ ಚಾನೆಲಿನಲ್ಲಿ ಸ್ಕಾಟಿಷ್ ಯೂಟ್ಯೂಬರ್ ಕ್ಯಾಲಮ್ ಮಿಲ್ ತನ್ನ ಪಾಕ್ ಪ್ರವಾಸದ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು ಜ್ಯೋತಿಯನ್ನು ಮಾತನಾಡಿಸಿದ್ದಾರೆ. ಲಾಹೋರಿನ ಅನಾರ್ಕಲಿ ಬಜಾರ್‌ನಲ್ಲಿ ಕ್ಯಾಲಮ್ ಮಿಲ್ ಸುತ್ತಾಡುತ್ತಿದ್ದಾಗ ಜ್ಯೋತಿ ಎದುರಾಗಿದ್ದಾಳೆ. ಈ ವೇಳೆ ಇಬ್ಬರ ನಡುವೆ ಸಣ್ಣ ಮಾತುಕತೆ ನಡೆದಿದೆ. ವಿಡಿಯೋದಲ್ಲಿ ಜ್ಯೋತಿಯನ್ನು ಅರು ಮಂದಿ ಶಸ್ತ್ರಸಜ್ಜಿತ ವ್ಯಕ್ತಿಗಳು ಸುತ್ತುವರೆದಿದ್ದಾರೆ.
ಮಾತುಕತೆಯ ವೇಳೆ ನಾನು ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಬಂದಿದ್ದೇನೆ ಎಂದು ಜ್ಯೋತಿ ಹೇಳಿದ್ದರೆ ಕ್ಯಾಲಮ್ ತಾನು ಐದು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಗಿ ಹೇಳಿದ್ದಾರೆ. ಪಾಕಿಸ್ತಾನ ಆತಿಥ್ಯ ಅದ್ಭುತವಾಗಿದೆ ಎಂದು ಜ್ಯೋತಿ ಹೊಗಳಿದ್ದಾಳೆ.
ವಿಡಿಯೋದಲ್ಲಿ ಕ್ಯಾಲಮ್, ಆಕೆಯ ಸುತ್ತಲೂ ಬಂದೂಕುಧಾರಿಗಳು ಇದ್ದಾರೆ. ಈ ರೀತಿ ಭದ್ರತೆ ನೀಡಿದಾಗ ಈ ಪ್ರದೇಶ ಅಸುರಕ್ಷಿತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪಾಕಿಸ್ತಾನ ಪ್ರವಾಸದ ಸಮಯದಲ್ಲಿ ಜ್ಯೋತಿ ಮಲ್ಹೋತ್ರಾಗೆ ನೀಡಿದ ವಿಐಪಿ ಸ್ವಾಗತದ ಬಗ್ಗೆ ಈಗ ಭಾರೀ ಅನುಮಾನ ಮೂಡಿದೆ. ಪಾಕ್‌ನ ಭದ್ರತಾ ಮತ್ತು ಗುಪ್ತಚರ ಅಧಿಕಾರಿಗಳು ಭಾಗವಹಿಸಿದ್ದ ಉನ್ನತ ಮಟ್ಟದ ಪಾರ್ಟಿಗಳಿಗೆ ಆಕೆಯನ್ನು ಆಹ್ವಾನಿಸಲಾಗಿತ್ತು ಎಂದು ವರದಿಯಾಗಿದೆ.
ಸದ್ಯ ಹರ್ಯಾಣದ ಹಿಸ್ಸಾರ್ ಪೊಲೀಸರ ಕಸ್ಟಡಿಯಲ್ಲಿ ಜ್ಯೋತಿ ಇದ್ದಾಳೆ. ಆಕೆಯಿಂದ ಮೂರು ಮೊಬೈಲ್ ಫೋನ್‌ಗಳು, ಒಂದು ಲ್ಯಾಪ್‌ಟಾಪ್ ಮತ್ತು ಇತರ ಕೆಲವು ಎಲೆಕ್ಟ್ರಾನಿಕ್ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.