ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಜಿಟಲ್ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಯಾಮಾರಿಸುವ ಹಲವು ವಿಧದ ವಂಚನೆಗಳು ಬೆಳಕಿಗೆ ಬರುತ್ತಲೇ ಇವೆ. ಗ್ರಾಹಕರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುವುದು, ಪ್ರಲೋಬನೆಯೊಡ್ಡಿ ವಂಚನೆ ಮಾಡುವುದು ಇತ್ಯಾದಿ ಘಟನೆಗಳು ಸಾಕಷ್ಟು ವರದಿಯಾಗಿದೆ.
ಸರ್ಕಾರ ಈ ನಿಟ್ಟಿನಲ್ಲಿ ಕಟ್ಟುನಿಟ್ಟಾದ ಕ್ರಮ ಕಂಡುಕೊಳ್ಳಲು ಮುಂದಾಗಿದೆ. ಗ್ರಾಹಕರ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದಾದ 13 ಡಾರ್ಕ್ ಪ್ಯಾಟರ್ನ್ಗಳನ್ನು ಸರ್ಕಾರ ಗುರುತಿಸಿದೆ.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ನೇತೃತ್ವದಲ್ಲಿ ಪ್ರಹ್ಲಾದ್ ಜೋಶಿ ದೆಹಲಿಯಲ್ಲಿ ನಾಳೆ ಉನ್ನತ ಮಟ್ಟದ ಸಭೆ ನಡೆಯಲಿದೆ.
ಇ ಕಾಮರ್ಸ್ ವೇದಿಕೆಗಳಲ್ಲಿನ ವ್ಯಾಪಾರ-ವಹಿವಾಟುಗಳ ಬಗ್ಗೆ ವಿವಿಧ ರೀತಿಯ ದೂರುಗಳು ಬರುತ್ತಿವೆ. ಕೆಲವವೊಂದು ಕರಾಳ ಮಾದರಿಗಳ (ಡಾರ್ಕ್ ಪ್ಯಾಟರ್ನ್) ಬಗ್ಗೆ ಗ್ರಾಹಕರಲ್ಲಿ ತೀವ್ರ ಅಸಮಾಧಾನ ಮೂಡಿದೆ. ಹಾಗಾಗಿ ಗ್ರಾಹಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಅಂಶಗಳ ಕುರಿತು ಚರ್ಚಿಸಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.