ಮತ್ತೆ ಕೊರೋನಾ ಕೇಡುಗಾಲ? ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕೋವಿಡ್ RTPCR ಲ್ಯಾಬ್ ಪುನರಾರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಸರ್ಕಾರಿ ಆಸ್ವತ್ರೆಯಲ್ಲಿರುವ ಆರ್​ಟಿಪಿಸಿಆರ್ ಪ್ರಯೋಗಾಲಯವನ್ನು ಸನ್ನದ್ಧಗೊಳಿಸಲಾಗುತ್ತಿದೆ.

ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಅದರಂತೆ ದೇವನಹಳ್ಳಿಯಲ್ಲಿಯೂ ಸಿದ್ಧತೆ ಆರಂಭಿಸಲಾಗಿದೆ. ದೇವನಹಳ್ಳಿಯ ಸರ್ಕಾರಿ ಆಸ್ವತ್ರೆಯಲ್ಲಿ ಕೋವಿಡ್ 2 ನೇ ಅಲೆ ಸಂದರ್ಭದಲ್ಲಿ ತೆರೆದಿದ್ದ ಆರ್​ಟಿಪಿಸಿಆರ್ ಲ್ಯಾಬ್ ಅನ್ನು ಮಂಗಳವಾರ ಪುನರಾರಂಭ ಮಾಡಲಾಯಿತು.

ಅಧಿಕಾರಿಗಳು ಲ್ಯಾಬ್​​ನಲ್ಲಿರುವ ಟೆಸ್ಟಿಂಗ್ ಯಂತ್ರಗಳ ಪರಿಶೀಲನೆ ನಡೆಸಿದರು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಮಾದರಿ ಸಂಗ್ರಹ ಹಾಗೂ ಪರೀಕ್ಷೆಗೆ ಆರ್​ಟಿಪಿಸಿಆರ್ ಲ್ಯಾಬ್ ಪುನರಾರಂಭ ಮಾಡಲಾಗಿದೆ. ಲ್ಯಾಬ್​ಗಳಿಗೆ ಬೆಂಗಳೂರು ಗ್ರಾಮಾಂತರ ಡಿಹೆಚ್ಒ ಕೃಷ್ಣಾರೆಡ್ಡಿ ಬೇಟಿ ನೀಡಿ ಸಿದ್ದತೆಗಳ ಪರಿಶೀಲನೆ ನಡೆಸಿದ್ದಾರೆ.

ಕೆಂಪೇಗೌಡ ವಿಮಾನ ನಿಲ್ದಾಣ ಸೇರಿದಂತೆ ಬೆಂಗಳೂರು ನಗರದ ಹೊರವಲಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಹದ್ದಿನ ಕಣ್ಣಿಟ್ಟಿದ್ದು, ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗದಂತೆ ಎಚ್ಚರಿಕೆ ವಹಿಸಿದೆ. ಈ ಮಧ್ಯೆ, ಜಿಲ್ಲೆಯಲ್ಲಿ ಎರಡು ಸಕ್ರಿಯ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಒಬ್ಬರು ಪೈಲಟ್ ಆಗಿದ್ದಾರೆ. ಕೋವಿಡ್ ಪ್ರಕರಣಗಳ ಬಗ್ಗೆ ಗಮನಹರಿಸಿ, ಮಾದರಿ ಸಂಗ್ರಹ ಮಾಡುವಂತೆ ಜಿಲ್ಲಾ ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದು, ಜನರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ ಓಡಾಡುವಂತೆ ಸಲಹೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!